ಶಿಶುಪಾಲನಾ ಕೇಂದ್ರದಲ್ಲಿ ಮಕ್ಕಳಿಗೆ ಚಿತ್ರಹಿಂಸೆ ಆರೋಪ; ಐವರು ಮಹಿಳಾ ಸಿಬ್ಬಂದಿ ವಿರುದ್ಧ ಎಫ್‌ಐಆರ್

ಬೆಂಗಳೂರು : ನಗರದ ಶಿಶುಪಾಲನಾ ಕೇಂದ್ರದಲ್ಲಿ(ಡೇ ಕೇರ್ ಸೆಂಟರ್) ಎರಡು ವರ್ಷದ ಮಕ್ಕಳಿಗೆ ಚಿತ್ರಹಿಂಸೆ ನೀಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಎಚ್‌ಎಎಲ್‌ಪೊಲೀಸ್ ಠಾಣೆಯಲ್ಲಿ ಐವರು ಮಹಿಳಾ ಸಿಬ್ಬಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಎಚ್‌ಎಎಲ್ ಆವರಣದಲ್ಲಿರುವ ಖಾಸಗಿ ಕಂಪೆನಿಯ ಆವರಣದಲ್ಲಿರುವ ಶಿಶುಪಾಲನಾ ಕೇಂದ್ರದಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆದಿದೆ. ಸದ್ಯ ವಿಡಿಯೋ ವೈರಲ್ ಆಗಿದ್ದು, ವೀಡಿಯೊಗಳ ಆಧಾರದ ಮೇಲೆ ಮಕ್ಕಳ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಐವರು ಮಹಿಳಾ ಸಿಬ್ಬಂದಿಯ ವಿರುದ್ಧ ಬಾಲಾಪರಾಧ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶೀಘ್ರದಲ್ಲೇ ಆರೋಪಿ ಮಹಿಳೆಯರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಿಬ್ಬಂದಿಯು ಪುಟ್ಟ ಮಕ್ಕಳನ್ನು ವಾಷಿಂಗ್ ಮೆಷಿನ್ ಒಳಗೆ ಕೂರಿಸುತ್ತಿದ್ದರು. ಅಷ್ಟೇ ಅಲ್ಲದೆ, ಮಕ್ಕಳನ್ನು ಬಲವಂತವಾಗಿ ವೆಸ್ಟರ್ನ್ ಶೌಚಾಲಯದ ಮೇಲೆ ಕೂರಿಸಿ, ಅವರ ಬಾಯಿಗೆ ಶೌಚಾಲಯದ ಜೆಟ್ ಸ್ಪ್ರೇ ಮೂಲಕ ನೀರು ಹೊಡೆಯುತ್ತಿದ್ದರು. ಮಕ್ಕಳನ್ನು ಬಾತ್‌ರೂಮ್‌ನಲ್ಲಿ ಕೂಡಿ ಹಾಕಿ ಬೆದರಿಸಲಾಗುತ್ತಿದೆ ಮತ್ತು ದೈಹಿಕವಾಗಿ ಹಿಂಸೆ ನೀಡಲಾಗಿತ್ತಿದೆ ಎಂದು ಪೋಷಕರು ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಐಟಿ ಕಂಪೆನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಮ್ಮ ಮಕ್ಕಳನ್ನು ಈ ಕೇಂದ್ರದಲ್ಲಿ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದರು. ಈ ದೌರ್ಜನ್ಯದ ವೀಡಿಯೊಗಳು ಸೋಮವಾರ ವಾಟ್ಸ್ ಆ್ಯಪ್‌ನಲ್ಲಿ ಹರಿದಾಡಿದ್ದು, ಕೂಡಲೇ ಈ ಬಗ್ಗೆ ಮಕ್ಕಳ ಸಹಾಯವಾಣಿಗೂ ದೂರು ಸಲ್ಲಿಕೆಯಾಗಿದೆ ಎಂದು ವರದಿಯಾಗಿದೆ.






