ಪಟಾಕಿ ಅವಘಡ: ಬೆಂಗಳೂರಿನಲ್ಲಿ 140ಕ್ಕೂ ಹೆಚ್ಚು ಮಂದಿಗೆ ಕಣ್ಣಿನ ಗಾಯ

ಸಾಂದರ್ಭಿಕ ಚಿತ್ರ | PC : Image by macrovector on Magnific
ಬೆಂಗಳೂರು : ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಪಟಾಕಿ ಸಿಡಿಸುವುದರಿಂದ ಸಂಭವಿಸಿದ ಅವಘಡಗಳು ಆತಂಕ ಮೂಡಿಸಿವೆ. ಪಟಾಕಿ ಸಿಡಿತದಿಂದಾಗಿ ಕಣ್ಣಿಗೆ ಗಾಯಗೊಂಡ 140ಕ್ಕೂ ಹೆಚ್ಚು ಪ್ರಕರಣಗಳು ನಗರದ ವಿವಿಧ ಕಣ್ಣಿನ ಆಸ್ಪತ್ರೆಗಳಲ್ಲಿ ವರದಿಯಾಗಿವೆ.
ಗಾಯಾಳುಗಳಲ್ಲಿ ಮಕ್ಕಳು ಮತ್ತು ಹಸುಗೂಸುಗಳು ಸೇರಿದ್ದು ಹಲವರು ಗಂಭೀರ ಸ್ವರೂಪದ ಗಾಯಗಳಿಗೆ ಒಳಗಾಗಿದ್ದಾರೆ. ಕೆಲವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವೂ ಎದುರಾಗಿದೆ. ನಗರದ ನಾರಾಯಣ ನೇತ್ರಾಲಯದ ರಾಜಾಜಿನಗರ ಕೇಂದ್ರದಲ್ಲಿ 41 ಪ್ರಕರಣಗಳು ವರದಿಯಾಗಿದ್ದರೆ, ಬೊಮ್ಮಸಂದ್ರ, ಬನ್ನೇರುಘಟ್ಟ ರಸ್ತೆ ಮತ್ತು ವೈಟ್ಫೀಲ್ಡ್ ಕೇಂದ್ರಗಳಲ್ಲಿ ಒಟ್ಟು 29 ಪ್ರಕರಣಗಳು ದಾಖಲಾಗಿವೆ. ಮಿಂಟೊ ಆಸ್ಪತ್ರೆಯಲ್ಲಿ 44 ಪ್ರಕರಣಗಳು ವರದಿಯಾಗಿದ್ದು, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 26 ಪ್ರಕರಣಗಳು ದಾಖಲಾಗಿವೆ.
ರಾಜಾಜಿನಗರದ ನಾರಾಯಣ ನೇತ್ರಾಲಯದಲ್ಲಿ ದಾಖಲಾಗಿರುವ 41 ಗಾಯಾಳುಗಳ ಪೈಕಿ 24 ಮಂದಿ 18 ವರ್ಷದೊಳಗಿನ ಮಕ್ಕಳು. ಅಂದರೆ, ಒಟ್ಟು ಗಾಯಾಳುಗಳಲ್ಲಿ ಶೇ.59ರಷ್ಟು ಮಕ್ಕಳು. 31 ಪುರುಷರು ಮತ್ತು 10 ಮಹಿಳೆಯರು ಗಾಯಗೊಂಡಿದ್ದಾರೆ. ಇವರಲ್ಲಿ 29 ಮಂದಿ ತಾವೇ ಪಟಾಕಿ ಸಿಡಿಸುವಾಗ ಗಾಯಗೊಂಡಿದ್ದರೆ, 12 ಮಂದಿ ಬೇರೆಯವರು ಸಿಡಿಸಿದ ಪಟಾಕಿಯಿಂದ ಗಾಯಗೊಂಡಿದ್ದಾರೆ. 40 ಮಂದಿಗೆ ಔಷಧೋಪಚಾರದ ಮೂಲಕ ಚಿಕಿತ್ಸೆ ನೀಡಲಾಗಿದ್ದು, ಒಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ನಾರಾಯಣ ನೇತ್ರಾಲಯದ ಇತರ ಮೂರು ಕೇಂದ್ರಗಳಲ್ಲಿ ದಾಖಲಾಗಿರುವ 29 ಪ್ರಕರಣಗಳ ಪೈಕಿ 15 ಮಕ್ಕಳು ಗಾಯಗೊಂಡಿದ್ದಾರೆ. ಏಳು ಮಂದಿ ಪಟಾಕಿ ಸಿಡಿಸುವುದನ್ನು ನೋಡುತ್ತಿದ್ದ ಸಂದರ್ಭದಲ್ಲಿ ಗಾಯಗೊಂಡಿದ್ದರೆ, 22 ಮಂದಿ ಪಟಾಕಿ ಸಿಡಿಸುವಾಗ ಗಾಯಗಳಿಗೆ ಒಳಗಾಗಿದ್ದಾರೆ. ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ದಾಖಲಾದ 26 ಪ್ರಕರಣಗಳಲ್ಲಿ ಮೂರು ತಿಂಗಳ ಹಸುಗೂಸು ಸೇರಿದೆ ಎಂದು ತಿಳಿದು ಬಂದಿದೆ.
ಮಿಂಟೊ ನೇತ್ರ ಆಸ್ಪತ್ರೆಯಲ್ಲಿ ನ.6ರಿಂದ 10ರವರೆಗೆ ಒಟ್ಟು 44 ಕಣ್ಣಿನ ಗಾಯದ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 18 ಮಕ್ಕಳು ಹಾಗೂ 26 ವಯಸ್ಕರು ಸೇರಿದ್ದಾರೆ. ಗಾಯಾಳು ಮಕ್ಕಳಲ್ಲಿ 15 ಬಾಲಕರು ಮತ್ತು ಮೂವರು ಬಾಲಕಿಯರಿದ್ದರೆ, ವಯಸ್ಕರಲ್ಲಿ 22 ಪುರುಷರು ಮತ್ತು ನಾಲ್ವರು ಮಹಿಳೆಯರಿದ್ದಾರೆ. ಗಾಯಾಳುಗಳಲ್ಲಿ 28 ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, 16 ಮಂದಿಗೆ ಸಾಮಾನ್ಯ ಸ್ವರೂಪದ ಗಾಯಗಳಾಗಿವೆ.
ಮಿಂಟೊ ಆಸ್ಪತ್ರೆಯ ವರದಿ ಪ್ರಕಾರ, ನ.6ರಂದು ಒಂದು, ನ.7ರಂದು ಒಂದು, ನ.8ರಂದು 12, ನ.9ರಂದು 14 ಹಾಗೂ ನ.10ರಂದು 16 ಪ್ರಕರಣಗಳು ದಾಖಲಾಗಿವೆ. ಗಾಯಗೊಂಡವರಲ್ಲಿ 18 ಮಂದಿ ತಾವೇ ಪಟಾಕಿ ಸಿಡಿಸುವಾಗ ಗಾಯಗೊಂಡಿದ್ದರೆ, 26 ಮಂದಿ ಬೇರೆಯವರು ಸಿಡಿಸಿದ ಪಟಾಕಿಯಿಂದ ಗಾಯಗೊಂಡಿದ್ದಾರೆ. ಅಂದರೆ, ಪಟಾಕಿ ಸಿಡಿಸುವವರಿಗಿಂತ ಅದನ್ನು ಸುತ್ತಮುತ್ತ ನಿಂತು ವೀಕ್ಷಿಸುವವರು ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡಿರುವುದು ಆತಂಕಕಾರಿ ಸಂಗತಿಯಾಗಿದೆ.
ಪಟಾಕಿಗಳ ವಿಧವನ್ನು ಗಮನಿಸಿದರೆ, ಬಿಜಿಲಿಯಿಂದ 15, ಆಟಂ ಬಾಂಬ್ನಿಂದ ಏಳು, ಲಕ್ಷ್ಮಿ ಪಟಾಕಿಯಿಂದ ನಾಲ್ಕು ಹಾಗೂ ಇತರ ಪಟಾಕಿಗಳಿಂದ 10 ಪ್ರಕರಣಗಳು ವರದಿಯಾಗಿವೆ. ಗಾಯಾಳುಗಳಲ್ಲಿ 37 ಮಂದಿ ಬೆಂಗಳೂರಿನವರಾಗಿದ್ದು, ಉಳಿದವರು ದೊಡ್ಡಬಳ್ಳಾಪುರ, ಮೈಸೂರು, ರಾಯಚೂರು, ಬಾಗಲಕೋಟೆ, ತುಮಕೂರು ಹಾಗೂ ಹೊಸಕೋಟೆಯವರಾಗಿದ್ದಾರೆ.






