‘ತಿರುಮಲ ದೇಗುಲದ ನಿತ್ಯದ ಮೊದಲ ಆರತಿ’

ಬೆಂಗಳೂರು : ತಿರುಪತಿಯಲ್ಲಿ ನಿತ್ಯ ನಡೆಯುವ ಮೊದಲ ಆರತಿ ಕರ್ನಾಟಕದ್ದು. ಈ ಆರತಿಯನ್ನು ಕರ್ನಾಟಕದ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಇತರ ಗಣ್ಯರಿಗೆ ಶಿಷ್ಟಾಚಾರದ ಪ್ರಕಾರ ನೀಡುವ ಸಂಬಂಧ ರಾಜ್ಯ ಸರಕಾರದಿಂದ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ರವಿವಾರ ನಗರದ ಬನಶಂಕರಿಯ ಆರನೇ ಹಂತದ ಲಿಂಗಧೀರನಹಳ್ಳಿಯಲ್ಲಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇಗುಲದ ಶೀಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ತಿರುಮಲ ವೆಂಕಟೇಶ್ವರ ದೇಗುಲದ ಒಳ ಮುಖ್ಯದ್ವಾರದ ಬಳಿ ತೆರಳಿ ಪೂಜೆ ಮಾಡಲು ರಾಜ್ಯದ ಮುಖ್ಯಮಂತ್ರಿಗೆ ಮಾತ್ರ ಅವಕಾಶವಿದೆ. ಈ ಆರತಿಯನ್ನು ಪ್ರತಿದಿನ ಕರ್ನಾಟಕ ಸರಕಾರದ ವಿಶೇಷ ಅಧಿಕಾರಿ ಪಡೆಯುತ್ತಾರೆ ಎಂದು ತಿಳಿಸಿದರು.
ಇನ್ನು ಮುಂದಿನ ದಿನಗಳಲ್ಲಿ, ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು, ನ್ಯಾಯಾಧೀಶರು ಸೇರಿದಂತೆ ಯಾರಾದರೂ ಭೇಟಿ ನೀಡಿದ್ದರೆ ಅಥವಾ ಸರಕಾರದ ಪರವಾಗಿ ಯಾರೆ ಹೋಗಿದ್ದರೂ ಅವರಿಗೆ ಈ ಆರತಿ ನೀಡಬೇಕು ಎನ್ನುವ ಆದೇಶ ಹೊರಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಶಿವಕುಮಾರ್ ಹೇಳಿದರು.
ಈ ಸಂದರ್ಭದಲ್ಲಿ ಸಂಸದರಾದ ಡಾ.ಕೆ.ಸುಧಾಕರ್, ಡಾ.ಜಿ.ಸಿ.ಚಂದ್ರಶೇಖರ್, ಶಾಸಕರಾದ ಡಾ.ಅಜಯ್ ಸಿಂಗ್, ಎಸ್.ಟಿ.ಸೋಮಶೇಖರ್, ಕಂಪ್ಲಿ ಗಣೇಶ್, ರಾಜಗುರು ದ್ವಾರಕನಾಥ್, ಶೃಂಗೇರಿ ಶಾರದಾ ಮಠದ ಆಡಳಿತಾಧಿಕಾರಿ ಗೌರಿಶಂಕರ್, ಕೃಷ್ಣಮೂರ್ತಿ, ಡಾ.ಶಂಕರ್ ಗುಹಾ, ನಿವೃತ್ತ ಐಎಎಸ್ ಅಧಿಕಾರಿ ಶಾಮ್ ಭಟ್ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯದ ಎಷ್ಟೋ ಮಂದಿ ಶಾಸಕರು, ಜನಪ್ರತಿನಿಧಿಗಳು ತಿರುಪತಿಗೆ ಹೋದಾಗ ದರ್ಶನ ಸಿಗದೇ ವಾಪಸ್ ಬಂದಿದ್ದಾರೆ. ಈಗ ದೇವರ ಮುಂದೆ ನಿಂತು ಆರತಿ ಪಡೆಯಲು ಅವಕಾಶ ನೀಡಲಾಗುವುದು. ಈ ರಾಜ್ಯದ ಸೇವೆ ಮಾಡುವವರಿಗೆ ದೇವರಲ್ಲಿ ಪ್ರಾರ್ಥನೆ ಮಾಡಲು ಈ ಅವಕಾಶ ಒದಗಿಸಲಾಗಿದೆ. ಇದು ನನ್ನ ಕಾಲದಲ್ಲಿ ಆಗಲಿರುವ ಮುಖ್ಯ ಘೋಷಣೆ.
-ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ






