ಇನ್ಮುಂದೆ ಪ್ರಥಮ ಪಿಯುಸಿ ಪರೀಕ್ಷೆಗೆ ರಾಜ್ಯಾದ್ಯಂತ ಒಂದೇ ಪ್ರಶ್ನೆಪತ್ರಿಕೆ, ವೇಳಾಪಟ್ಟಿ: ಶಿಕ್ಷಣ ಇಲಾಖೆ ಆದೇಶ

ಸಾಂದರ್ಭಿಕ ಚಿತ್ರ | Image by rawpixel.com on Magnific
ಬೆಂಗಳೂರು: ಪದವಿ ಪೂರ್ವ ಹಂತದ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಮಹತ್ವದ ಹೆಜ್ಜೆಯಿಟ್ಟಿದ್ದು, ಇನ್ನು ಮುಂದೆ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಗೆ ರಾಜ್ಯಾದ್ಯಂತ ಏಕರೂಪದ ಪ್ರಶ್ನೆ ಪತ್ರಿಕೆ ಇರಲಿದೆ. ಜೊತೆಗೆ, ಪರೀಕ್ಷಾ ವೇಳಾಪಟ್ಟಿಯೂ ಒಂದೇ ಆಗಿರಲಿದೆ.
ಶನಿವಾರ ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ(ಪದವಿ ಪೂರ್ವ ಶಿಕ್ಷಣ)ಯು ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದ್ದು, 2027ರ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯಿಂದಲೇ ರಾಜ್ಯಾದ್ಯಂತ ಏಕರೂಪದ ಪ್ರಶ್ನೆಪತ್ರಿಕೆ ಮತ್ತು ಏಕರೂಪದ ಪರೀಕ್ಷೆ ವೇಳಾಪಟ್ಟಿಯನ್ನು ಜಾರಿಗೆ ತರಲಾಗುತ್ತಿದೆ. ಈ ಏಕರೂಪದ ಪ್ರಶ್ನೆಪತ್ರಿಕೆಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಸಿದ್ಧಪಡಿಸಿ, ಕಾಲೇಜುಗಳಿಗೆ ಡಿಜಿಟಲ್ ರೂಪದಲ್ಲಿ ತಲುಪಿಸಲಿದೆ ಎಂದು ಹೇಳಿದೆ.
ಪ್ರಥಮ ಪಿಯುಸಿ ಪರೀಕ್ಷೆಗೆ ಏಕರೂಪದ ಪ್ರಶ್ನೆಪತ್ರಿಕೆಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಿದ್ಧಪಡಿಸಿ ಕೊಡಲಿದೆ. ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ನೇತೃತ್ವದಲ್ಲಿಯೇ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳಿಗೆ ಅನ್ವಯವಾಗುವಂತೆ ಏಕರೂಪದ ಪರೀಕ್ಷಾ ವೇಳಾಪಟ್ಟಿ ಸಿದ್ಧಪಡಿಸಿ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯ ದಿನದಂದು ಪ್ರಶ್ನೆಪತ್ರಿಕೆಗಳನ್ನು ಡಿಜಿಟಲ್ ರೂಪದಲ್ಲಿ ಸಂಬಂಧಪಟ್ಟ ಕಾಲೇಜುಗಳಿಗೆ ರವಾನಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇನ್ನು, ಪ್ರಥಮ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ಮಾತ್ರ ಜಿಲ್ಲಾಮಟ್ಟದಲ್ಲಿ ಸಿದ್ಧಪಡಿಸಿದ ವೇಳಾಪಟ್ಟಿಯಂತೆ ನಡೆಸಲಾಗುತ್ತದೆ. ರಾಜ್ಯಮಟ್ಟದಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದರೂ, ಮೌಲ್ಯಮಾಪನ ಪ್ರಕ್ರಿಯೆ ಕಾಲೇಜು ಹಂತದಲ್ಲಿಯೇ ನಡೆಯಲಿದೆ. ಬಳಿಕ ಫಲಿತಾಂಶವನ್ನು ಸಂಬಂಧಪಟ್ಟ ಜಿಲ್ಲಾ ಉಪನಿರ್ದೇಶಕರು ಪರಿಶೀಲಿಸಿ ಅನುಮೋದಿಸಿದ ನಂತರ ಪ್ರಕಟಿಸಲಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಈ ಹೊಸ ವ್ಯವಸ್ಥೆಯಿಂದ ಪ್ರಥಮ ಪಿಯುಸಿ ಹಂತದಲ್ಲಿಯೇ ಶಿಕ್ಷಣದ ಗುಣಮಟ್ಟದ ಮೇಲೆ ಇಲಾಖೆ ನಿಗಾ ವಹಿಸಲು ಸಾಧ್ಯವಾಗಲಿದೆ. ಅಲ್ಲದೆ, ವಿದ್ಯಾರ್ಥಿಗಳ ಕಲಿಕಾ ಸಾಮಥ್ರ್ಯವನ್ನು ಸುಧಾರಿಸುವ ಮೂಲಕ ದ್ವಿತೀಯ ಪಿಯುಸಿ ಫಲಿತಾಂಶದ ಪ್ರಮಾಣ ಹೆಚ್ಚಿಸಲು ಸಹಕಾರಿಯಾಗಲಿದೆ. ಪ್ರಥಮ ಪಿಯುಸಿ ವಿದ್ಯಾರ್ಥಿಗಳು, ಕಾಲೇಜು ಆಡಳಿತ ಮಂಡಳಿಗಳು ಹಾಗೂ ಪೆÇೀಷಕರು ಈ ಬದಲಾವಣೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ಒದಗಿಸುವುದು ಸರಕಾರದ ಉದ್ದೇಶವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಿಕ್ಷಣದ ಗುಣಮಟ್ಟವನ್ನು ಪ್ರಥಮ ಪಿಯುಸಿ ಹಂತದಲ್ಲಿಯೇ ಉತ್ತಮಪಡಿಸುವುದು ಹಾಗೂ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಸಮಾನ ಮಾದರಿಯ ಪ್ರಶ್ನೆಪತ್ರಿಕೆ ಒದಗಿಸುವುದು ಈ ಕ್ರಮದ ಉದ್ದೇಶವಾಗಿದೆ. ಆದರೆ, ವಾರ್ಷಿಕ ಪರೀಕ್ಷೆಗಳನ್ನು ನಡೆಸುವ ಮತ್ತು ಮೌಲ್ಯಮಾಪನ ಮಾಡುವ ಪ್ರಕ್ರಿಯೆ ಹಿಂದಿನಂತೆಯೇ ಸ್ಥಳೀಯ ಮಟ್ಟದಲ್ಲಿ ನಡೆಯಲಿದೆ. ಪರೀಕ್ಷೆ ಹಾಗೂ ಮೌಲ್ಯಮಾಪನ ಜವಾಬ್ದಾರಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.






