ಬೆಂಗಳೂರು | 25 ಕೋಟಿ ರೂ. ವಂಚನೆ ಆರೋಪ : ಐವರ ವಿರುದ್ಧ ಎಫ್ಐಆರ್, ಓರ್ವನ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು : ಕ್ಯಾಸಿನೋ, ಬಿಟ್ ಕಾಯಿನ್ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಹಾಗೂ ಬಡ್ಡಿ ನೀಡುವುದಾಗಿ ನಂಬಿಸಿ ಉದ್ಯಮಿಯಿಂದ ಸುಮಾರು 25 ಕೋಟಿ ರೂ. ಪಡೆದು, ವಂಚಿಸಿದ ಆರೋಪದಡಿ ಐವರ ವಿರುದ್ಧ ಇಲ್ಲಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಪ್ರಕರಣ ದಾಖಲಾಗಿದ್ದು, ಈ ಪೈಕಿ ಓರ್ವನನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ವಂಚನೆಗೊಳಗಾದ ವಿವೇಕ್ ಪಿ. ಹೆಗ್ಗಡೆ ಎಂಬುವರು ನೀಡಿದ ದೂರಿನ ಮೇರೆಗೆ ರಾಮಕೃಷ್ಣರಾವ್, ಪತ್ನಿ ರಾಜೇಶ್ವರಿ ರಾವ್, ಮಗ ರಾಹುಲ್ ತೋನ್ಸೆ, ಪುತ್ರಿ ರಕ್ಷಾ ತೋನ್ಸೆ ಹಾಗೂ ಅಳಿಯ ಚೇತನ್ ನಾರಾಯಣ್ ವಿರುದ್ಧ ವಂಚನೆ ಹಾಗೂ ಅನಿಯಂತ್ರಿತ ಠೇವಣಿ ನಿಷೇಧ ಕಾಯ್ದೆಯಡಿ (ಬಡ್ಸ್) ಪ್ರಕರಣ ದಾಖಲಾಗಿದೆ.
ಎ1 ಆರೋಪಿ ರಾಮಕೃಷ್ಣರಾವ್ ಬಂಧಿತರಾಗಿದ್ದು, ಇನ್ನುಳಿದ ಆರೋಪಿಗಳು ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಾಜೆಸ್ಟಿಕ್ ಕಂಪೆನಿಯೊಂದರ ಮಾಲಕನಾಗಿದ್ದ ದೂರುದಾರ ವಿವೇಕ್ ಎಂಬುವರಿಗೆ ಸ್ನೇಹಿತರ ಮುಖಾಂತರ 2023ರಲ್ಲಿ ರಾಮಕೃಷ್ಣರಾವ್ ಪರಿಚಯವಾಗಿತ್ತು. ಮಗ ರಾಹುಲ್ ಹಾಗೂ ಅಳಿಯ ಶ್ರೀಲಂಕಾ ಹಾಗೂ ದುಬೈನಲ್ಲಿ ಕ್ಯಾಸಿನೋ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಉದ್ಯಮ ವಿಸ್ತರಣೆಗೆ ಹಣದ ಅಗತ್ಯವಿದ್ದು, ಸಾಲ ನೀಡುವಂತೆ ತನಗೆ ಮನವಿ ಮಾಡಿದ್ದರು. ನಂತರ, ರಾಮಕೃಷ್ಣರಾವ್ ಅವರು ವಿವೇಕ್ಗೆ ನಂಬಿಕೆ ಮೂಡಿಸಲು ಶ್ರೀಲಂಕಾದಲ್ಲಿರುವ ಕ್ಯಾಸಿನೋಗೆ ಕರೆದೊಯ್ದು ಮಗ ರಾಹುಲ್ನನ್ನು ಪರಿಚಯಿಸಿದ್ದರು. ಬಳಿಕ ದುಬೈನಲ್ಲಿದ್ದ ಮಗಳು ಹಾಗೂ ಅಳಿಯನನ್ನು ಕರೆಯಿಸಿ ದೂರುದಾರರೊಂದಿಗೆ ಹೂಡಿಕೆ ಮಾಡುವಂತೆ ಮಾತುಕತೆ ನಡೆಸಿದ್ದರು. ಕ್ಯಾಸಿನೋ ಹಾಗೂ ಬಿಟ್ ಕಾಯಿನ್ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಹಂತ-ಹಂತವಾಗಿ ರಾಮಕೃಷ್ಣರಾವ್ ಕುಟುಂಬ ಆಮಿಷವೊಡ್ಡಿತ್ತು ಎಂದು ವಿವೇಕ್ ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ದುಬೈ ಹಾಗೂ ಶ್ರೀಲಂಕಾದಲ್ಲಿ ಕ್ಯಾಸಿನೋ ನಡೆಸಲಾಗುತ್ತಿದ್ದು, ಭವಿಷ್ಯದಲ್ಲಿ ಉದ್ಯಮವನ್ನು ವಿಸ್ತರಣೆ ಮಾಡಿದರೆ ಹೆಚ್ಚು ಹಣ ಸಂಪಾದಿಸಬಹುದು. ಹೀಗಾಗಿ ಹಣದ ಅಗತ್ಯವಿದೆ. ಶ್ರೀಲಂಕಾದಲ್ಲಿ ಸಿಟಿ ಆಫ್ ಡ್ರೀಮ್ಸ್ ಹೆಸರಿನಲ್ಲಿ ಕ್ಯಾಸಿನೋ ತೆರೆಯಲಿದ್ದು, ಇಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಹೇಳಿದ್ದರು. ಈ ಮಾತನ್ನು ನಂಬಿ ಆರೋಪಿಗಳ ಅಣತಿಯಂತೆ ಕೋಟ್ಯಂತರ ರೂಪಾಯಿ ಹಣವನ್ನು ಸಾಲದ ರೂಪದಲ್ಲಿ ನೀಡಿದ್ದೆ. ಇದಕ್ಕೆ ಪ್ರತಿಯಾಗಿ ಅವರು ಪ್ರತಿ-ತಿಂಗಳು ಬಡ್ಡಿ ನೀಡುವುದಾಗಿ ಭರವಸೆ ನೀಡಿದ್ದರು.
2023ರಿಂದ ಈವರೆಗೆ ಸುಮಾರು 25 ಕೋಟಿ ರೂ. ಸಾಲ ಕೊಟ್ಟಿದ್ದೆ. ಕಾಲಕ್ರಮೇಣ ಬಡ್ಡಿ ನೀಡದಿರುವ ಬಗ್ಗೆ ಅನುಮಾನ ಬಂದು ಪ್ರಶ್ನಿಸಿದಾಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅಲ್ಲದೇ, ಹೆಚ್ಚಿನ ಲಾಭಾಂಶ ಹಾಗೂ ಬಡ್ಡಿ ಆಸೆ ತೋರಿಸಿ ಹಣ ಪಡೆದು ವಂಚಿಸಿದ್ದಾರೆ ಎಂದು ವಿವೇಕ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.







