ಬೆಂಗಳೂರು | ಮಾಲಕನಿಗೆ ವಂಚಿಸಿ 1.51 ಕೋಟಿ ರೂ. ದೋಚಿ ಪರಾರಿಯಾಗಿದ್ದ ಆರೋಪಿ ಸೆರೆ

ಸಾಂದರ್ಭಿಕ ಚಿತ್ರ | PC : freepik.com
ಬೆಂಗಳೂರು : ಕೆಲಸ ನೀಡಿದ್ದ ಮಾಲಕನಿಗೆ ವಂಚಿಸಿ 1.51 ಕೋಟಿ ರೂ. ನಗದು ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಇಲ್ಲಿನ ವೈಯಾಲಿಕಾವಲ್ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಆಂಧ್ರ ಪ್ರದೇಶದ ಗುಂಟೂರು ಮೂಲದ ರಾಜೇಶ್(45) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನಿಂದ 1.48 ಕೋಟಿ ರೂ. ನಗದು ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ವೈಯಾಲಿಕಾವಲ್ನ ಕೋದಂಡರಾಯನಪುರದಲ್ಲಿರುವ ಚಾರ್ಟರ್ಡ್ ಅಕೌಂಟೆಂಟ್ ತೋಟಪ್ರಸಾದ್ ಎಂಬವರ ಬಳಿ ಸುಮಾರು 10 ವರ್ಷಗಳಿಂದಲೂ ಕಾರು ಚಾಲಕನಾಗಿ ರಾಜೇಶ್ ಕೆಲಸ ಮಾಡುತ್ತಿದ್ದ. ಮೇ 6ರಂದು ಬ್ಯಾಂಕ್ಗೆ ಡೆಪಾಸಿಟ್ ಮಾಡಬೇಕಿರುವ ಗ್ರಾಹಕರ ಟ್ಯಾಕ್ಸ್ ಹಣವನ್ನು ಕಾರಿನಲ್ಲಿಡುವಂತೆ ಮಾಲಕ ತೋಟಪ್ರಸಾದ್ ಅವರು ರಾಜೇಶ್ಗೆ ನೀಡಿದ್ದರು. ಆದರೆ, ಆರೋಪಿ ಹಣವನ್ನು ಕಾರಿನಲ್ಲಿರಿಸದೆ ಕದ್ದು, ತನ್ನ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದ. ಕೂಡಲೇ ವೈಯಾಲಿಕಾವಲ್ ಪೊಲೀಸ್ ಠಾಣೆಗೆ ತೋಟಪ್ರಸಾದ್ ದೂರು ನೀಡಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ರಾಜೇಶ್ನನ್ನು ಬಂಧಿಸಿ 1.48 ಕೋಟಿ ರೂ. ನಗದು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.





