ಇನ್ನು ಮುಂದೆ ಗ್ರಾಮ ಪಂಚಾಯತ್ ಗಳಲ್ಲಿ ಸಿಗಲಿದೆ 'ವಾಸ ಸ್ಥಳ ಪ್ರಮಾಣ ಪತ್ರ' !

ಪ್ರಾತಿನಿಧಿಕ ಚಿತ್ರ
ಬೆಂಗಳೂರು, ಜೂ.22: 'ವಾಸ ಸ್ಥಳ ಪ್ರಮಾಣ ಪತ್ರ'ಕ್ಕಾಗಿ ಗ್ರಾಮೀಣ ಪ್ರದೇಶದ ಜನರು ಇನ್ನು ಮುಂದೆ ಹೋಬಳಿ ಕೇಂದ್ರಕ್ಕೆ ಅಲೆದಾಡಬೇಕಿಲ್ಲ. ಊರಿನ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ 'ವಾಸ ಸ್ಥಳ ಪ್ರಮಾಣ ಪತ್ರ' ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ಮಹತ್ವದ ಆದೇಶ ಹೊರಡಿಸಿದೆ.
ಗ್ರಾಮ ಪಂಚಾಯತ್ ಗಳಲ್ಲೇ 'ವಾಸಸ್ಥಳ ದೃಢೀಕರಣ ಪತ್ರ'(Residence confirmation letter) ನೀಡುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ(PDO)ಗಳಿಗೆ ರಾಜ್ಯ ಸರಕಾರ ಆದೇಶಿಸಿದೆ.
ಪಂಚಾಯತ್ ಅಭಿವೃದ್ಧಿ ಅಧಿಕಾರಿಯು ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರ್ಹ ನಿವಾಸಿಗಳಿಗೆ ಒಂದು ಬಾರಿಗೆ ಅಭಿಯಾನ ಮಾದರಿಯಲ್ಲಿ ವಾಸಸ್ಥಳ ಪ್ರಮಾಣ ಪತ್ರ ನೀಡಲು ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಪ್ರಸಕ್ತ ಅಟಲ್ ಜೀ ಜನಸ್ನೇಹಿ ಕೇಂದ್ರದ ತಂತ್ರಾಂಶದಲ್ಲಿ ಲಭ್ಯವಿರುವ ಸೇವೆಯನ್ನು ಬಳಸಿಕೊಳ್ಳಬೇಕು. ಯಾವುದೇ ಸೇವಾ ಶುಲ್ಕವನ್ನು ವಿಧಿಸುವಂತಿಲ್ಲ. ದೃಢೀಕರಣ ಪತ್ರ ನೀಡಲು ಅಗತ್ಯವಿರುವ ದಾಖಲೆಗಳು ಮತ್ತು ಕಾರ್ಯವಿಧಾನದ ಕುರಿತು ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.




