ಜ.18ರಿಂದ 10 ದಿನಗಳ ಕಾಲ ಲಾಲ್‍ಬಾಗ್‍ನಲ್ಲಿ ಬಸವಣ್ಣ, ವಚನ ಸಾಹಿತ್ಯಾಧಾರಿತ ಫಲಪುಷ್ಪ ಪ್ರದರ್ಶನ
ಬೆಂಗಳೂರು: ಇಲ್ಲಿನ ಲಾಲ್‍ಬಾಗ್‍ನಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಜ.18ರಿಂದ 28ರ ವರೆಗೆ ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯಾಧಾರಿತ 215ನೆ ಫಲಪುಷ್ಪ ಪ್ರದರ್ಶನ ನಡೆಯಲಿದೆ ಎಂದು ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜ.18ರಂದು ಸಂಜೆ 6 ಗಂಟೆಗೆ ಗಾಜಿನ ಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸುವರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತೋಟಗಾರಿಕೆ ಇಲಾಖೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮತ್ತಿತರರು ಉಪಸ್ಥಿತರಿರುವರು ಎಂದರು.
ಗಾಜಿನ ಮನೆಯ ಒಳಾಂಗಣದ ಪರಿಧಿಯಲ್ಲಿ 60 ಪ್ರತ್ಯೇಕ ಫಲಕಗಳಲ್ಲಿ ಬಸವಣ್ಣನವರ ಜೀವನ ದರ್ಶನ, ವಚನ ಸಾಹಿತ್ಯ, ನಾನಾ ಶರಣರ ಚಿತ್ರ, ವಚನಗಳನ್ನು ಕಲಾತ್ಮಕವಾಗಿ ಸಂಯೋಜಿಸಿ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪ್ರದರ್ಶಿಸುವ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೇ ಹಲವಾರು ಬಗೆಯ ಹೂವು, ಎಲೆಗಳನ್ನು ಬಳಸಿ ಪುಷ್ಪ ಗೋಪುರ ರಚಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಗಾಜಿನ ಮನೆಯ ಕೇಂದ್ರ ಭಾಗದಲ್ಲಿ 10 ಅಡಿಯ ಬಸವಣ್ಣನ ಪ್ರತಿಮೆ ಮತ್ತು 30 ಅಡಿ ಎತ್ತರದ ಅನುಭವ ಮಂಟಪ ಈ ಬಾರಿಯ ಪ್ರದರ್ಶನದ ಪ್ರಮುಖ ಆಕರ್ಷಣೆಗಳಾಗಿವೆ. ಗಾಜಿನಮನೆಯ ಒಳಾಂಗಣದ ಹಿಂಬದಿಯ ಆವರಣದಲ್ಲಿ ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ, ಕುಂಬಾರ ಗುಂಡಣ್ಣ, ಅಕ್ಕನಾಗಲಾಂಬಿಕೆ, ಮಡಿವಾಳ ಮಾಚಿದೇವ, ಸಮಗಾರ ಹರಳಯ್ಯ, ಬಾಚಿಕಾಯಕದ ಬಸವಣ್ಣ, ಶರಣೆ ಸತ್ಯಕ್ಕನವರ ಪ್ರತಿಮೆಗಳನ್ನು ಸೂಕ್ತ ಪೀಠದ ಮೇಲಿರಿಸಿ ಹೂಗಳಿಂದ ಅಲಂಕರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಗಾಜಿನ ಮನೆಯ ಒಳಾಂಗಣದಲ್ಲಿ 8 ಅಡಿ ಅಗಲ ಮತ್ತು 7 ಅಡಿ ಉದ್ದದ ಪ್ರದೇಶದಲ್ಲಿ ವಚನ ಸಾಹಿತ್ಯಕ್ಕೆ ಪೂರಕವಾದ ವಚನಗಳಿರುವ ಪ್ರಾಚೀನ ಓಲೆಗರಿ ಹಸ್ತಪ್ರತಿಗಳನ್ನು ಮತ್ತು ಅವುಗಳ ಸಂರಕ್ಷಣಾ ವಿಧಾನ ಹಾಗೂ ಮಹತ್ವದ ಕುರಿತು ವಿಶೇಷ ಪ್ರದರ್ಶನ ಇರಲಿದೆ. ಹಿಂದಿನ ಬಾರಿ ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 12 ಲಕ್ಷ ಮಂದಿ ಆಗಮಿಸಿದ್ದು, ಈ ಬಾರಿ 10-12 ಲಕ್ಷ ಮಂದಿ ಆಗಮಿಸುವ ನಿರೀಕ್ಷೆಯಿದೆ ಎಂದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಜಿ.ಕುಸುಮಾ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಬಸವಣ್ಣನವರ ವಚನ ಸಾಹಿತ್ಯದ ಕುರಿತು ಸಾಹಿತ್ಯ, ಸಂಗೀತ, ಕಲೆಯ ಮೂಲಕ ಇಡೀ ದಿನ ಪ್ರದರ್ಶಿಸಲು ವಿಶೇಷ ವೇದಿಕೆ ನಿರ್ಮಿಸಲಾಗಿದೆ. ಎಲ್‍ಇಡಿ ಸ್ಕ್ರೀನ್‍ಗಳ ಮುಖೇನ ಲಾಲ್‍ಬಾಗ್‍ನ 6 ಆಯ್ದ ಸ್ಥಳಗಳಲ್ಲಿ ಅನಾವರಣಗೊಳ್ಳುವ ಬಸವಣ್ಣನವರ ತತ್ವದರ್ಶನ, ಬಸವಾದಿ ಶರಣರ ದರ್ಶನ, ವಚನ ಸಾಹಿತ್ಯಕ್ಕೆ ಪೂರಕವಾದ ಮಾಹಿತಿಯನ್ನು ಪ್ರದರ್ಶಿಸಲಾಗುವುದು ಎಂದರು. ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಸ್. ರಮೇಶ್, ಅಪರ ನಿರ್ದೇಶಕ ಪ್ರಕಾಶ್ ಸೊಬರದ ಮತ್ತಿತರರು ಉಪಸ್ಥಿತರಿದ್ದರು.
ಪಾರ ವ್ಯವಸ್ಥೆ: ವಾಹನದಲ್ಲಿ ಬರುವವರಿಗೆ ಶಾಂತಿನಗರ ಬಸ್ ನಿಲ್ದಾಣದ ಬಳಿ ಇರುವ ಬಹುಮಹಡಿ ವಾಹನ ನಿಲುಗಡೆ, ಹಾಪ್‍ಕಾಮ್ಸ್ ಆವರಣ, ಹಾಗೂ ಜೆ.ಸಿ.ರಸ್ತೆಯಲ್ಲಿನ ಬಿಬಿಎಂಪಿ ಬಹುಮಹಡಿ ವಾಹನ ನಿಲುಗಡೆ ಪ್ರದೇಶಗಳಲ್ಲಿ ಕಾರುಗಳನ್ನು ನಿಲ್ಲಿಸಬಹುದು. ದ್ವಿಚಕ್ರ ವಾಹನಗಳಲ್ಲಿ ಬರುವವರು ಆಲ್ ಅಮೀನ್ ಕಾಲೇಜು ಆವರಣದ ನಿಲ್ದಾಣ ಪ್ರದೇಶದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಸಾಧ್ಯವಾದಷ್ಟು ಜನರು ಮೆಟ್ರೊ, ಬಸ್‍ಗಳಲ್ಲಿ ಬರುವುದು ಉತ್ತಮ ಎಂದು ನಿರ್ದೇಶಕರು ತಿಳಿಸಿದರು. ಸಿಸಿ ಕ್ಯಾಮರಾಗಳು, ಶೌಚಾಲಯ, ಕುಡಿಯುವ ನೀರು ಇತ್ಯಾದಿ ವ್ಯವಸ್ಥೆಗಳನ್ನು ಮಾಡಲಾಗಿದೆ.
‘ಉದ್ಯಾನವನದಲ್ಲಿ ಸುಮಾರು ನೂರಕ್ಕೂ ಹೆಚ್ಚು ಬೀದಿ ನಾಯಿಗಳು ಇದ್ದು, ಮೂರ್ನಾಲ್ಕು ನಾಯಿಗಳು ತುಂಬಾ ಉಗ್ರ ಸ್ವರೂಪದ್ದಾಗಿವೆ. ಹೀಗಾಗಿ ಇವುಗಳನ್ನು ಮಾತ್ರ ಪ್ರದರ್ಶನದ 11 ದಿನಗಳ ಕಾಲ ಬೇರೆಡೆಗೆ ಸ್ಥಳಾಂತರಿಸಲಾಗುವುದು. ನಂತರ ಇಲ್ಲಿಗೆ ಕರೆತರಲಾಗುವುದು. ಜತೆಗೆ ಎಲ್ಲ ಶ್ವಾನಗಳಿಗೆ ಆಂಟಿ ರೇಬಿಸ್ ಚುಚ್ಚು ಮದ್ದು ನೀಡಲಾಗಿದೆ. ಜೇನು, ಹಾವುಗಳಿಂದ ಯಾವುದೇ ಹಾನಿಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
-ಡಾ.ಎಂ.ಜಗದೀಶ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ
ಶಾಲಾ ಮಕ್ಕಳಿಗೆ ಉಚಿತ: ‘ಒಂದರಿಂದ 10ನೆ ತರಗತಿ ವರೆಗಿನ ಶಾಲಾ ಮಕ್ಕಳಿಗೆ ಸಮವಸ್ತ್ರ ಧರಿಸಿ ಬಂದರೆ ಉಚಿತ ಪ್ರವೇಶ ನೀಡಲಾಗುವುದು. ರಜಾದಿನಗಳನ್ನು ಹೊರತುಪಡಿಸಿ ಈ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ. ಇನ್ನು ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ 80 ರೂ. ರಜಾ ದಿನಗಳಲ್ಲಿ 100ರೂ. 12 ವರ್ಷದೊಳಗಿನ ಮಕ್ಕಳಿಗೆ ಎಲ್ಲ ದಿನಗಳಲ್ಲೂ 30ರೂ.ಪ್ರವೇಶ ಶುಲ್ಕವಿದೆ. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ.







