ಪೊಲೀಸರು ಪ್ರಾಮಾಣಿಕವಾಗಿ ಕೆಲಸ ಮಾಡದೇ, ಕರ್ತವ್ಯದಲ್ಲಿ ಲೋಪ ಮಾಡಿದರೆ ಇಡೀ ವ್ಯವಸ್ಥೆಯೇ ಹಾಳಾಗುತ್ತದೆ : ಜಿ.ಪರಮೇಶ್ವರ್

ಬೆಂಗಳೂರು : ಪೊಲೀಸರು ಪ್ರಾಮಾಣಿಕವಾಗಿ ಕೆಲಸ ಮಾಡದೇ, ಕರ್ತವ್ಯದಲ್ಲಿ ಲೋಪ ಮಾಡಿದರೆ ಇಡೀ ವ್ಯವಸ್ಥೆಯೇ ಹಾಳಾಗುತ್ತದೆ. ಆದುದರಿಂದ ಯಾವುದೆ ಕರ್ತವ್ಯ ಲೋಪವಾಗದಂತೆ ಜವಾಬ್ಧಾರಿಯುತವಾಗಿ ಕೆಲಸ ಮಾಡಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಲಹೆ ನೀಡಿದ್ದಾರೆ.
ಶನಿವಾರ ನಗರದ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಪ್ರದಾನ ಕಚೇರಿಯಲ್ಲಿ ಸ್ಥಾಪಿಸಲಾದ ಕಾರಾಗೃಹ ‘ಸೆಂಟ್ರಲ್ ಕಮಾಂಡ್ ಸೆಂಟರ್’ನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರ ಬಹಳ ವಿಶ್ವಾಸದಿಂದ ಕೈದಿಗಳನ್ನು ಪೊಲೀಸರ ಕೈಗೆ ಕೊಟ್ಟಿದ್ದು, ಅವರ ಮನಃಪರಿವರ್ತನೆ ಮಾಡಿ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಆತ್ಮಸಾಕ್ಷಿಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಸಿಬ್ಬಂದಿಯ ಕರ್ತವ್ಯದ ಮೇಲೆ ಹಿರಿಯ ಅಧಿಕಾರಿಗಳು ನಿಗಾವಹಿಸಬೇಕು. ನಾವು ಕರ್ತವ್ಯದಲ್ಲಿ ತಪ್ಪು ಎಸಗಿ ನಾಲ್ಕು ಜನರಿಂದ ತಪ್ಪಿಸಿಕೊಳ್ಳಬಹುದು. ಆದರೆ ಆತ್ಮಸಾಕ್ಷಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಕಣ್ಣುತಪ್ಪಿ, ಯಾವುದೇ ವಸ್ತುಗಳು ಜೈಲಿನ ಒಳಗೆ ಹೋಗಲು ಸಾಧ್ಯವಿಲ್ಲ. ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಸಿಬ್ಬಂದಿಯ ನಿರ್ಲಕ್ಷ್ಯದಿಂದ ಇದೆಲ್ಲ ಸಾಧ್ಯವಾಗುತ್ತಿದೆ. ಇದನ್ನು ತಡೆಯಲು ನಿಮ್ಮಿಂದ ಸಾಧ್ಯವಿದೆ ಎಂದು ಹೇಳಿದರು.
ರಾಜ್ಯದ ಎಲ್ಲ ಕಾರಾಗೃಹಗಳಲ್ಲಿನ ಚಟುವಟಿಕೆಗಳ ಮೇಲೆ ನಿಗಾವಹಿಸಲು ಅನುಕೂಲವಾಗುವ ನಿಟ್ಟಿನಲ್ಲಿ ‘ಸೆಂಟ್ರಲ್ ಕಮಾಂಡ್ ಸೆಂಟರ್’ ಸ್ಥಾಪಿಸಲು ತೀರ್ಮಾನಿಸಲಾಗಿತ್ತು. ಈ ಕ್ರಮದಿಂದ ಬಹಳಷ್ಟು ಸುಧಾರಣೆಯಾಗುತ್ತದೆ. ಜೈಲುಗಳಿಗೆ ಭೇಟಿ ನೀಡುವವರ ವಸ್ತುಗಳನ್ನು ತಪಾಸಣೆ ನಡೆಸುವುದು, ಸಿಬ್ಬಂದಿ ಕಾರ್ಯಚಟುವಟಿಕೆಯನ್ನು ಕಮಾಂಡ್ ಸೆಂಟರ್‍ನಿಂದ ನಿಗಾವಹಿಸಲು ಸಾಧ್ಯವಾಗುತ್ತದೆ. ಇದೊಂದು ಉತ್ತಮ ಹೆಜ್ಜೆ. ಉತ್ತಮವಾಗಿ ಆಡಳಿತ ನಡೆಸಲು ಬಹಳ ಸಹಾಯವಾಗುತ್ತದೆ ಎಂದು ಹೇಳಿದರು.
ಕಾರಾಗೃಹ ಇಲಾಖೆ ಎನ್ನುವುದಕ್ಕಿಂತ ಸುಧಾರಣೆ ಇಲಾಖೆ ಎನ್ನುವುದು ಮುಖ್ಯ. ಯಾವುದೋ ಕಾರಣಕ್ಕಾಗಿ ವ್ಯಕ್ತಿ ತಪ್ಪು ಮಾಡಬಹುದು. ಆತನನ್ನು ಸರಿಪಡಿಸುವುದು ನಮ್ಮ ಕೆಲಸ ಎಂಬ ನಿಟ್ಟಿನಲ್ಲಿ ಸುಧಾರಣಾ ಇಲಾಖೆ ಎಂದು ಮಾಡಲಾಗಿದೆ. ನಾನು ಮೂರು ಬಾರಿ ಗೃಹ ಸಚಿವನಾಗಿ ನನ್ನ ಅವಧಿಯಲ್ಲಿ ಸುಮಾರು 2500 ಕೈದಿಗಳನ್ನು ಸುಧಾರಣೆ ಮಾಡಿ, ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯು ಬಹಳ ಉತ್ತಮವಾಗಿ ಕೆಲಸ ಮಾಡುತ್ತಿದೆ. ಬಹಳ ವರ್ಷಗಳಿಂದ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯಲ್ಲಿ ನೇಮಕಾತಿ ನಡೆದಿಲ್ಲ. ಸಿಬ್ಬಂದಿ ನೇಮಕಾತಿ ಮಾಡಿಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿದ್ದಾರೆ. ಇದಕ್ಕೆ ತಕ್ಷಣದ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ರಾಜ್ಯ ಕಾರಾಗೃಹ ಮತ್ರು ಸುಧಾರಣಾ ಸೇವಾ ಇಲಾಖೆಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್, ಪೊಲೀಸ್ ಉಪಮಹಾನಿರೀಕ್ಷ ಜಿನೇಂದ್ರ ಖನಗಾವಿ, ಪೊಲೀಸ್ ಅಧೀಕ್ಷಕ ಅಂಶು ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.







