ಲೋಕಾಯುಕ್ತ ಬಲೆಗೆ ಬಿದ್ದಿದ್ದ ಕೆ.ಪಿ.ಅಗ್ರಹಾರ ಠಾಣೆಯ ಇನ್‍ಸ್ಪೆಕ್ಟರ್ ಅಮಾನತು : ಜಿ.ಪರಮೇಶ್ವರ್

ಬೆಂಗಳೂರು : ಅಪರಾಧ ಪ್ರಕರಣವೊಂದರಲ್ಲಿ ಸಹಾಯ ಮಾಡಲು 4 ಲಕ್ಷ ರೂ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಕೆ.ಪಿ.ಅಗ್ರಹಾರ ಠಾಣೆಯ ಇನ್‍ಸ್ಪೆಕ್ಟರ್ ಗೋವಿಂದರಾಜು ಎಂಬಾತನನ್ನು ಅಮಾನತು ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಶನಿವಾರ ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಲಂಚ ಪಡೆದ ಆರೋಪ ಸಂಬಂಧ ಇನ್‍ಸ್ಪೆಕ್ಟರ್‍ನನ್ನು ಅಮಾನತು ಮಾಡಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೆಲ ದಿನಗಳ ಹಿಂದೆ ವಾರ್ಷಿಕ ಪೊಲೀಸ್ ಸಮ್ಮೇಳನದಲ್ಲಿ ಭ್ರಷ್ಠಾಚಾರ ಪ್ರಕರಣದಲ್ಲಿ ಸಿಲುಕಕೂಡದು ಎಂದು ಎಚ್ಚರಿಸಲಾಗಿತ್ತು. ಪದೇ ಪದೇ ಇಂತಹ ಘಟನೆಯಾದಾಗ ಸರ್ಕಾರಕ್ಕೆ ಹಾಗೂ ವೈಯುಕ್ತಿಕವಾಗಿ ನನಗೂ ಮುಜುಗರವಾಗಲಿದೆ. ಆಗಾಗ ಇಂತಹ ಘಟನೆಗಳು ಯಾಕೆ ನಡೆಯುತ್ತದೆ ಎಂಬುದರ ಬಗ್ಗೆ ಅಧ್ಯಯನ ಮಾಡಬೇಕಿದೆ ಎಂದು ಜಿ.ಪರಮೇಶ್ವರ್ ಹೇಳಿದರು.
ಪೋಸ್ಟಿಂಗ್ ಕೊಡಲು ಹಣ ಕೊಡುವ ವ್ಯವಸ್ಥೆ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ನನ್ನ ಹಂತದಲ್ಲಿ ಇಂತಹ ವಿಚಾರ ನಡೆಸುವುದಕ್ಕೆ ಬಿಡುವುದಿಲ್ಲ. ನಮಗೆ ಜವಾಬ್ದಾರಿ ಇದೆ. ಜನರಿಗೆ ನಾವು ಉತ್ತರ ಕೊಡಬೇಕು. ಜನ ನಮ್ಮನ್ನು ಗೆಲ್ಲಿಸಿದ್ದಾರೆ. ಆದಷ್ಟು ಈ ತರಹದ ಘಟನೆ ಆಗದ ರೀತಿ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಈ ಬಗ್ಗೆ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಉಪ್ಪು ತಿಂದವರು ನೀರು ಕುಡಿಯಲೇಬೇಕು. ಪ್ರಾಮಾಣಿಕವಾಗಿದ್ದರೆ ಲೋಕಾಯುಕ್ತಕ್ಕೂ ಹೆದರುವುದು ಬೇಡ, ಸರಕಾರಕ್ಕೂ ಹೆದರುವುದು ಬೇಡ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ನಾವು ಬದ್ಧವಾಗಿದ್ದೇವೆ. ಭ್ರಷ್ಟಾಚಾರದಲ್ಲಿ ತೊಡಗಿರುವವರ ಪರ ನಮ್ಮ ಸರಕಾರ ಯಾವುದೇ ಕಾರಣಕ್ಕೂ ನಿಲ್ಲಲ್ಲ ಎಂದು ತಿಳಿಸಿದರು.
ಪ್ರಕರಣದ ಹಿನ್ನೆಲೆ: ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ದಾಖಲಾಗಿದ್ದ ವಂಚನೆ ಪ್ರಕರಣವೊಂದರಲ್ಲಿ ಮೊಹಮ್ಮದ್ ಅಕ್ಬರ್ ಎಂಬಾತ ಆರೋಪಿಯಾಗಿದ್ದ. ಆ ಪ್ರಕರಣದ ಕುರಿತು ಇನ್‍ಸ್ಪೆಕ್ಟರ್ ಗೋವಿಂದರಾಜು ಅವರು ಬೆದರಿಸಿ 4 ಲಕ್ಷ ರೂ.ಲಂಚಕ್ಕೆ ಬೇಡಿಕೆಯಿಟ್ಟಿರುವುದರ ಕುರಿತು ಲೋಕಾಯುಕ್ತ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಜ.29ರ ಗುರುವಾರ ಮೈಸೂರು ರಸ್ತೆಯ ಸಿಎಎಆರ್ ಮೈದಾನ ಬಳಿ ಪೊಲೀಸ್ ಸಮವಸ್ತ್ರದಲ್ಲಿಯೇ ಲಂಚ ಪಡೆಯುತ್ತಿದ್ದಾಗ ಇನ್‍ಸ್ಪೆಕ್ಟರ್ ಗೋವಿಂದರಾಜು ಸಿಕ್ಕಿಬಿದ್ದಿದ್ದ. ಟ್ರ್ಯಾಪ್‍ಗೆ ಒಳಗಾಗುತ್ತಿದ್ದಂತೆ ಗೋವಿಂದರಾಜು ಜೋರಾಗಿ ಚೀರಾಡಿದ್ದರು. ಬಳಿಕ ಸಿನಿಮೀಯ ಶೈಲಿಯಲ್ಲಿ ಅವರನ್ನು ಬಂಧಿಸಲಾಗಿತ್ತು. ಲೋಕಾಯುಕ್ತ ದಾಳಿ ವೇಳೆ ಗೋವಿಂದರಾಜು ಚೀರಾಡಿದ್ದ ವಿಡಿಯೋ ವೈರಲ್ ಆಗಿತ್ತು.







