ಕೊಡಗಿನಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ : ಡಾ.ಜಿ.ಪರಮೇಶ್ವರ್

ಬೆಂಗಳೂರು, : ಕೊಡಗಿನ ಹೋಮ್‍ಸ್ಟೇನಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದೇಶಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಸ್ಥಳೀಯ ಪೊಲೀಸರು ತಕ್ಷಣ ಕ್ರಮ ತೆಗೆದುಕೊಂಡಿದ್ದಾರೆ. ಈಗಾಗಲೇ ಹೋಮ್‍ಸ್ಟೇಮ್‍ಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ಅದರ ಪ್ರಕಾರ ಹೋಮ್‍ಸ್ಟೇ ಮಾಲಕರು ನಡೆದುಕೊಳ್ಳಬೇಕು. ಅದನ್ನು ಮೀರಿ ಘಟನೆಗಳಾದಾಗ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಇಂತಹ ಘಟನೆಗಳಿಂದ ರಾಜ್ಯಕ್ಕಾಗಲಿ ಅಥವಾ ಸಮಾಜಕ್ಕಾಗಲಿ ಒಳ್ಳೆಯ ಸಂದೇಶ ಕೊಡುವುದಿಲ್ಲ. ಹೊರಗಿನಿಂದ ಬಂದವರ ಮೇಲೆ ಇತರ ಆದಾಗ ಏನು ಸಂದೇಶ ಹೋಗುತ್ತೆ. ನಮ್ಮ ಸಮಾಜ, ದೇಶದ ಬಗ್ಗೆ ಹೊರಗಡೆ ಯಾವ ರೀತಿಯ ಸಂದೇಶ ಹೋಗುತ್ತದೆ. ಈ ವಿಚಾರದಲ್ಲಿ ಕಠಿಣವಾದ ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಅವರು ಉಲ್ಲೇಖಿಸಿದರು.
ಘಟನೆ ಆದ ಬಳಿಕ ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ ಅನ್ನಿಸುತ್ತದೆ. ಪೊಲೀಸರಿಗೆ ಗೊತ್ತಾದ ತಕ್ಷಣ ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿ ಹೊರ ರಾಜ್ಯದ ಮೂಲದವನು ಎಂದು ಹೇಳಲಾಗುತ್ತಿದೆ. ಪರಿಶೀಲನೆ ಮಾಡುತ್ತಾರೆ ಎಂದು ಸಚಿವರು ಮಾಹಿತಿ ನೀಡಿದರು.






