‘ಆಸ್ತಿ ತೆರಿಗೆ ಪಾವತಿ’ ಶೇ.5ರಷ್ಟು ರಿಯಾಯಿತಿಗೆ ಮೇ 31ರವರೆಗೆ ಮಾತ್ರ ಅವಕಾಶ

ಬೆಂಗಳೂರು : ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ 2026 ಮೇ 31ರೊಳಗೆ ಆಸ್ತಿ ತೆರಿಗೆ ಪಾವತಿಸಿ ಶೇ.5ರಷ್ಟು ರಿಯಾಯಿತಿ ಪಡೆಯಬಹುದು ಎಂದು ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಹೇಳಿದ್ದಾರೆ.
ಶುಕ್ರವಾರ ಪ್ರಕಟನೆ ಹೊರಡಿಸಿರುವ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕೇಂದ್ರ, ಪಶ್ಚಿಮ, ಪೂರ್ವ, ದಕ್ಷಿಣ ಹಾಗೂ ಉತ್ತರ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ 2026-27ನೇ ಸಾಲಿನ ಆಸ್ತಿ ತೆರಿಗೆ ಪಾವತಿಸುವವರಿಗೆ ಶೇ.5ರಷ್ಟು ರಿಯಾಯಿತಿ ನೀಡಲಾಗುತ್ತಿದೆ. 2026 ಜೂನ್ ತಿಂಗಳಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲ. ಆದ್ದರಿಂದ ನಾಗರಿಕರು ಕೂಡಲೇ ಆಸ್ತಿ ತೆರಿಗೆ ಪಾವತಿಸಿ ಈ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಆಸ್ತಿ ತೆರಿಗೆಯನ್ನು ಆನ್‍ಲೈನ್ ಮೂಲಕ ಪಾವತಿಸಲು ಜಿಬಿಎ ಅಧಿಕೃತ ಜಾಲತಾಣ https://bbmptax.karnataka.gov.in ಗೆ ಭೇಟಿ ನೀಡಿ ಈಗಲೇ ತೆರಿಗೆ ಪಾವತಿಸಬಹುದಾಗಿದೆ. ನಾಗರಿಕರು ಆಸ್ತಿ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಅಥವಾ ಸಮಸ್ಯೆಗಳಿದ್ದಲ್ಲಿ ಜಿಬಿಎ ಸಹಾಯವಾಣಿ ಸಂಖ್ಯೆ 1533 ಅನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.




