‘ಜಿಬಿಎ’ ಹೆಸರು ಬದಲಿಸಲು ಸಿಎಂಗೆ ಪತ್ರ

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಟ್ಟಡದ ನಾಮಫಲಕದಲ್ಲಿ ‘ಕನ್ನಡವೇ ಉಸಿರು, ಕನ್ನಡವೇ ಹಸಿರು’ ಬರೆಯಲಾಗಿದೆ. ಬೆಂಗಳೂರಿಗೆ ‘ಗ್ರೇಟರ್ ಬೆಂಗಳೂರು ಅಥಾರಿಟಿ(ಜಿಬಿಎ) ಎಂಬ ಆಂಗ್ಲ ಹೆಸರಿಟ್ಟಿರುವುದರಿಂದ ಕನ್ನಡತನಕ್ಕೆ ಕುಂದುಂಟಾಗಿದೆ. ಅದನ್ನು ‘ಬೃಹತ್ ಬೆಂಗಳೂರು ಪ್ರಾಧಿಕಾರ’ ಎಂದು ಬದಲಿಸಬೇಕು ಎಂದು ಸಾಂಸ್ಕೃತಿಕ ಕ್ಷೇತ್ರದ ಗಣ್ಯರು ಹಾಗೂ ಹೋರಾಟಗಾರರು ಆಗ್ರಹಿಸಿದ್ದಾರೆ.
ಮಂಗಳವಾರ ಈ ಸಂಬಂಧ ಕನ್ನಡ ಗೆಳೆಯರ ಬಳಗ ಹಾಗೂ ಕರ್ನಾಟಕ ವಿಕಾಸ ರಂಗ ಜಂಟಿಯಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ಗೆ ಪತ್ರ ಬರೆದಿದೆ. ಇದಕ್ಕೆ ಚಿಂತಕ ಡಾ.ಜಿ.ರಾಮಕೃಷ್ಣ, ಲೇಖಕಿ ಡಾ. ವಿಜಯಾ, ನಟ ಡಾ.ಮುಖ್ಯಮಂತ್ರಿ ಚಂದ್ರು, ರಾಜ್ಯಸಭಾ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ, ನಿರ್ದೇಶಕ ಡಾ.ಟಿ.ಎಸ್.ನಾಗಾಭರಣ, ಜಾನಪದ ಲೋಕದ ಅಧ್ಯಕ್ಷ ಡಾ.ಹಿ.ಚಿ.ಬೋರಲಿಂಗಯ್ಯ, ಶಾಸನ ತಜ್ಞ ಡಾ.ಆರ್.ಶೇಷಶಾಸ್ತ್ರಿ, ಕನ್ನಡಪರ ಹೋರಾಟಗಾರರಾದ ರಾ.ನಂ.ಚಂದ್ರಶೇಖರ, ವ.ಚ.ಚನ್ನೇಗೌಡ ಪತ್ರಕ್ಕೆ ಸಹಿ ಹಾಕಿದ್ದಾರೆ.
ಬೆಂಗಳೂರು ಐತಿಹಾಸಿಕ ಕಾರಣಗಳಿಂದ ಕನ್ನಡ ರಾಜಧಾನಿ ಆಗಲಿಲ್ಲ. ಬೆಂಗಳೂರಿನಲ್ಲಿ ವಲಸಿಗರು ಹೆಚ್ಚಿರುವುದರಿಂದ ಬಹುಭಾಷಿಕ ನಗರ ಎಂದು ಗುರುತಿಸುತ್ತಾರೆ. ಸಾಕಷ್ಟು ಸಂಖ್ಯೆಯಲ್ಲಿ ಪರಭಾಷಿಕರಿರುವ ಮುಂಬೈ ಮತ್ತು ಚೆನ್ನೈನಂತಹ ನಗರಗಳು ಆ ರಾಜ್ಯದ ಅಧಿಕೃತ ಮತ್ತು ಪ್ರಾದೇಶಿಕ ಭಾಷೆಗೆ ಆದ್ಯತೆ ನೀಡಿವೆ. ‘ಬೃಹನ್ಮುಂಬೈ ಮಹಾನಗರ ಪಾಲಿಕೆ’, ಚೆನ್ನೈ ಪ್ರಾಧಿಕಾರವನ್ನು ‘ಪೆರುನಗರ ಚೆನ್ನೈ ಮಾನಾಗ್-ಆರಾಚಿ' ಎಂದು ಹೆಸರಿಸಲಾಗಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ ಎಂಬ ಹೆಸರು ಪರಭಾಷಿಕರ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಹೇಳಿದ್ದಾರೆ.
ಎಷ್ಟೋ ಬಡವಾಣೆಗಳಲ್ಲಿ ಕನ್ನಡಪರ ವ್ಯಕ್ತಿಗಳ ಹೆಸರಿಡಲು ವಿರೋಧಿಸಿರುವುದು, ಕನ್ನಡದಲ್ಲಿ ಮಾತನಾಡಲು ನಿರಾಕರಿಸುವ ಘಟನೆಗಳು ನಡೆದಿವೆ. ಈ ಸಂಗತಿಗಳನ್ನು ಪರಿಗಣಿಸಿ ರಾಜಧಾನಿಯಲ್ಲಿ ಕನ್ನಡ ಕಂಪು ಉಳಿಸಬೇಕೆಂದು ನಾವು ಮನವಿ ಮಾಡುತ್ತೇವೆ. ಕನ್ನಡ ಹೆಸರನ್ನು ಬಳಸಿದರೆ, ಭಾಷೆಗೆ ಅರ್ಹವಾದ ಗೌರವ ಸಿಗುವುದಲ್ಲದೆ, ಪ್ರಾಧಿಕಾರವು ಭಾವನಾತ್ಮಕವಾಗಿ ಕನ್ನಡಿಗರಿಗೆ ಹತ್ತಿರವಾಗುವ ಅವಕಾಶಗಳನ್ನು ಹೊಂದಿರುತ್ತದೆ. ಮುಂದಿನ ಸಚಿವ ಸಂಪುಟದಲ್ಲಿ ‘ಬೃಹತ್ ಬೆಂಗಳೂರು ಪ್ರಾಧಿಕಾರ’ ಎಂದು ಬದಲಿಸಿ ಆದೇಶ ಹೊರಡಿಸಬೇಕೇಂದು ಸಾಹಿತಿ-ಹೋರಾಟಗಾರರು ಒತ್ತಾಯಿಸಿದ್ದಾರೆ.






