ಜು.10ರಿಂದ ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿನ ಅನಾಥ ವಾಹನಗಳ ತೆರವು, ಹರಾಜು : GBA ಆಯುಕ್ತ ಮಹೇಶ್ವರ್ ರಾವ್

ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ 5 ನಗರ ಪಾಲಿಕೆಗಳಲ್ಲಿ ಜಿಬಿಎ ಕಾಯ್ದೆ-2024, ಸೆಕ್ಷನ್ 324ರ ಅನ್ವಯ ಜು.10ರಿಂದ ಅನಾಥ ವಾಹನಗಳ ತೆರವು ಕಾರ್ಯವನ್ನು ಆರಂಭಿಸಲಾಗುತ್ತಿದೆ ಎಂದು ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಈ ಸಂಬಂಧ ಬುಧವಾರ ಪತ್ರಿಕಾ ಪ್ರಕಟನೆ ಹೊರಡಿಸಿರುವ ಅವರು, ಜು.10ರಿಂದ ಅನ್ವಯವಾಗುವಂತೆ, ರಸ್ತೆಗಳು, ತೆರೆದ ಪ್ರದೇಶಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಲವಾರು ದಿನಗಳಿಂದ ಅನಾಥವಾಗಿ ಬಿಡಲಾದ ವಾಹನಗಳನ್ನು ಗುರುತಿಸಿ 5 ನಗರ ಪಾಲಿಕೆಗಳು ಹಾಗೂ ಸಂಚಾರ ಪೊಲೀಸ್ ಅಧಿಕಾರಿಗಳು ಅವುಗಳ ವಿರುದ್ಧ ಜಂಟಿ ಕಾರ್ಯಾಚರಣೆಯ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಗುರುತಿಸಲಾದ ಅನಾಥ ವಾಹನಗಳಿಗೆ 7 ದಿನಗಳ ಕಾಲಾವಕಾಶ ನೀಡಿ ಅಧಿಕೃತ ಸ್ಟಿಕ್ಕರ್ ಮಾದರಿಯ ನೋಟಿಸ್ ಅಂಟಿಸಲಾಗುವುದು. ನೋಟಿಸ್ ಅಂಟಿಸಿದ ವಾಹನಗಳ ಚಕ್ರಕ್ಕೆ ವೀಲ್ ಕ್ಲಾಂಪ್ ಅಳವಡಿಸಲಾಗುವುದು. ನೋಟಿಸ್ ನೀಡಿದ 7 ದಿನಗಳ ಒಳಗಾಗಿ ವಾಹನಗಳ ಮಾಲಕರು ವಾಹನಗಳನ್ನು ತೆರವುಗೊಳಿಸದಿದ್ದರೆ, ಅಂತಹ ವಾಹನಗಳನ್ನು ಎಳೆದುಕೊಂಡು ಹೋಗಿ ಜಪ್ತಿ ಮಾಡಲಾಗುವುದು ಎಂದು ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಜಪ್ತಿ ಮಾಡಲಾದ ಎಲ್ಲಾ ವಾಹನಗಳನ್ನು ನಿಯಮಾನುಸಾರ ಬಹಿರಂಗ ಹರಾಜು ಮಾಡಲಾಗುವುದು. ಸಾರ್ವಜನಿಕರು ರಸ್ತೆಗಳು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಯಾವುದೇ ವಾಹನಗಳನ್ನು ಬಿಟ್ಟಿದ್ದರೆ, ಈ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ತಕ್ಷಣವೇ, ಆ ವಾಹನಗಳನ್ನು ನಿಮ್ಮ ಸ್ವಂತ ಜಾಗಕ್ಕೆ ಸ್ಥಳಾಂತರಿಸಬೇಕು. ತಪ್ಪಿದ್ದಲ್ಲಿ ವಾಹನಗಳನ್ನು ಜಪ್ತಿ ಮಾಡಿ ಹರಾಜು ಹಾಕಲಾಗುವುದು ಎಂದು ಪ್ರಕಟನೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.






