GBA | ನಾಳೆ(ನ.30) ‘ಜನ ಕಲ್ಯಾಣ ಮಹೋತ್ಸವ’ ಕಾರ್ಯಕ್ರಮ; 17,771 ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆ

ಬೆಂಗಳೂರು : ಬೆಂಗಳೂರನ್ನು ಮತ್ತಷ್ಟು ಸಬಲೀಕೃತ ನಗರವನ್ನಾಗಿ ನಿರ್ಮಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ದಿಂದ ನಾಳೆ(ನ.30) ‘ಜನ ಕಲ್ಯಾಣ ಮಹೋತ್ಸವ’ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, 17,771 ಕುಟುಂಬಗಳ ಸಬಲೀಕರಣಕ್ಕಾಗಿ ಜೀವನೋಪಾಯ ಕಲ್ಪಿಸುವ ಸವಲತ್ತುಗಳನ್ನು ವಿತರಿಸಲಾಗುತ್ತಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಮಹತ್ವದ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಮಾಜದ ಬಡ, ಹಿಂದುಳಿದ ಮತ್ತು ದುರ್ಬಲ ವರ್ಗದವರನ್ನು ಬೆಂಬಲಿಸುವ ಗುರಿಯನ್ನು ಹೊಂದಿರುವ 10 ಕಲ್ಯಾಣ ಯೋಜನೆಗಳನ್ನು ಈ ಉಪಕ್ರಮವು ಒಟ್ಟುಗೂಡಿಸಿದ್ದು, ಬೆಂಗಳೂರಿನ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಆಯ್ಕೆಯಾದ 17,771 ಫಲಾನುಭವಿಗಳಿಗೆ ಇದರ ಪ್ರಯೋಜನ ತಲುಪಲಿದೆ ಎಂದು ಜಿಬಿಎ ತಿಳಿಸಿದೆ.
ಕೇವಲ ಕಲ್ಯಾಣ ಸವಲತ್ತುಗಳ ವಿತರಣಾ ಕಾರ್ಯಕ್ರಮಕ್ಕಿಂತ ಮಿಗಿಲಾಗಿ, ಬೆಂಗಳೂರಿನ ಬೆಳವಣಿಗೆಯ ಲಾಭವು ಅತಿ ಹೆಚ್ಚು ನೆರವಿನ ಅಗತ್ಯವಿರುವ ಕುಟುಂಬಗಳಿಗೆ ತಲುಪುವಂತೆ ಮಾಡುವ ಸರಕಾರದ ಬದ್ಧತೆಯನ್ನು ಜನ ಕಲ್ಯಾಣ ಮಹೋತ್ಸವ ಪ್ರತಿಬಿಂಬಿಸುತ್ತದೆ. ಒಟ್ಟು 352.81 ಕೋಟಿ ರೂ. ಆರ್ಥಿಕ ಗುರಿಯೊಂದಿಗೆ, ಕುಟುಂಬಗಳ ಅತ್ಯಂತ ಪ್ರಮುಖ ಅಗತ್ಯಗಳಾದ ಜೀವನೋಪಾಯ, ಶಿಕ್ಷಣ, ಸಂಚಾರ ವ್ಯವಸ್ಥೆ ಮತ್ತು ವಸತಿಯನ್ನು ಒದಗಿಸುವ ಮೂಲಕ, ಅವರಿಗೆ ಹೆಚ್ಚಿನ ಭದ್ರತೆ, ಸ್ವಾತಂತ್ರ್ಯ ಮತ್ತು ಘನತೆಯ ಬದುಕನ್ನು ಕಲ್ಪಿಸಲು ಈ ಉಪಕ್ರಮವು ಶ್ರಮಿಸುತ್ತದೆ ಎಂದು ಜಿಬಿಎ ಮಾಹಿತಿ ನೀಡಿದೆ.
ಜನರು ಸಂಪಾದಿಸಲು, ಬೆಳೆಯಲು ಮತ್ತು ಸ್ವಾವಲಂಬಿಗಳಾಗಲು ಅವಕಾಶಗಳನ್ನು ಸೃಷ್ಟಿಸುವುದಕ್ಕೆ ಈ ಉಪಕ್ರಮವು ಹೆಚ್ಚಿನ ಒತ್ತು ನೀಡುತ್ತದೆ. ಎಲೆಕ್ಟ್ರಿಕ್ ಮತ್ತು ಸಿಎನ್‍ಜಿ ಮಾರಾಟದ ಬಂಡಿಗಳು, ಆಟೋರಿಕ್ಷಾಗಳು ಮತ್ತು ಹೊಲಿಗೆ ಯಂತ್ರಗಳಿಗೆ ನೀಡುವ ಆರ್ಥಿಕ ನೆರವು, ಅರ್ಹ ಫಲಾನುಭವಿಗಳು ತಮ್ಮ ಜೀವನೋಪಾಯದ ಚಟುವಟಿಕೆಗಳನ್ನು ಪ್ರಾರಂಭಿಸಲು ಅಥವಾ ಬಲಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಜನರ ಆದಾಯ ಗಳಿಕೆಯ ಪ್ರಯತ್ನಗಳಿಗೆ ಬೆಂಬಲ ನೀಡುವ ಮೂಲಕ, ಕೇವಲ ತಾತ್ಕಾಲಿಕ ಪರಿಹಾರವನ್ನು ನೀಡುವ ಬದಲು ಕುಟುಂಬಗಳಿಗೆ ಶಾಶ್ವತ ಪ್ರಯೋಜನಗಳನ್ನು ಒದಗಿಸುವುದು ಈ ಯೋಜನೆಗಳ ಉದ್ದೇಶವಾಗಿದೆ ಎಂದು ಜಿಬಿಎ ಹೇಳಿದೆ.
ಹಲವಾರು ನಾಗರಿಕರಿಗೆ, ಸುಲಭ ಸಂಚಾರದ ಸೌಲಭ್ಯವು ಪರಾವಲಂಬನೆ ಮತ್ತು ಸ್ವಾವಲಂಬನೆಯ ನಡುವಿನ ವ್ಯತ್ಯಾಸವನ್ನು ನಿರ್ಧರಿಸುತ್ತದೆ. ಪೌರಕಾರ್ಮಿಕರು ಮತ್ತು ದುಡಿಯುವ ಮಹಿಳೆಯರಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, ವಿಕಲಚೇತನರಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನಗಳು ಮತ್ತು ಎಲೆಕ್ಟ್ರಿಕ್ ವೀಲ್‍ಚೇರ್‍ಗಳು ಈ ಯೋಜನೆಗಳಲ್ಲಿ ಸೇರಿವೆ. ದೈನಂದಿನ ಓಡಾಟವನ್ನು ಸುಲಭಗೊಳಿಸುವುದು, ಕೆಲಸಕ್ಕೆ ಹೋಗಲು ನೆರವಾಗುವುದು ಮತ್ತು ಸಂಚಾರದ ಸವಾಲುಗಳನ್ನು ಎದುರಿಸುತ್ತಿರುವವರ ಸ್ವಾವಲಂಬನೆಯನ್ನು ಹೆಚ್ಚಿಸುವುದು ಈ ಸವಲತ್ತುಗಳ ಉದ್ದೇಶವಾಗಿದೆ ಎಂದು ಜಿಬಿಎ ತಿಳಿಸಿದೆ.
ಈ ಉಪಕ್ರಮವು ‘ಅಮೃತ ಮಹೋತ್ಸವ’ ಮತ್ತು ‘ಒಂಟಿ ಮನೆ' ಯೋಜನೆಗಳ ಮೂಲಕ ವಸತಿ ಸಂಬಂಧಿತ ನೆರವನ್ನೂ ಒಳಗೊಂಡಿದೆ. ಈ 10 ಕಲ್ಯಾಣ ಯೋಜನೆಗಳು ಒಟ್ಟಾಗಿ ಕುಟುಂಬದ ಯೋಗಕ್ಷೇಮದ ಪ್ರಮುಖ ಅಂಶಗಳಾದ ಜೀವನೋಪಾಯ ಗಳಿಕೆ, ಶಿಕ್ಷಣ, ಸುಲಭ ಸಂಚಾರ ಮತ್ತು ಸುರಕ್ಷಿತ ಸೂರು ನಿರ್ಮಿಸಿಕೊಳ್ಳುವತ್ತ ಸಾಗಲು ನೆರವಾಗುತ್ತವೆ. ಬೆಂಗಳೂರಿನ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 35,610 ಅರ್ಜಿಗಳು ಸಲ್ಲಿಕೆಯಾಗುವ ಮೂಲಕ ಈ ಯೋಜನೆಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 17,771 ಫಲಾನುಭವಿಗಳ ಆಯ್ಕೆಯು ಈ ಉಪಕ್ರಮದ ವ್ಯಾಪ್ತಿಯನ್ನು ಮತ್ತು ಹಿಂದುಳಿದ ಸಮುದಾಯಗಳು, ಪೌರಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು ಮತ್ತು ವಿಕಲಚೇತನರು ಸೇರಿದಂತೆ ಸಮಾಜದ ವಿವಿಧ ವರ್ಗಗಳಿಗೆ ಇದು ತಲುಪಿರುವುದನ್ನು ಪ್ರತಿಬಿಂಬಿಸುತ್ತದೆ ಎಂದು ಜಿಬಿಎ ವಿವರಣೆ ನೀಡಿದೆ.
ಜನ ಕಲ್ಯಾಣ ಮಹೋತ್ಸವವು ನಗರಾಭಿವೃದ್ಧಿಯಲ್ಲಿ ‘ಜನ ಮೊದಲು' ಎಂಬ ದೃಷ್ಟಿಕೋನವನ್ನು ಪ್ರತಿನಿಧಿಸುತ್ತದೆ. ಒಂದು ನಗರದ ಪ್ರಗತಿಯನ್ನು ಕೇವಲ ಅದರ ಮೂಲಸೌಕರ್ಯ ಮತ್ತು ಆರ್ಥಿಕ ಬೆಳವಣಿಗೆಯಿಂದ ಮಾತ್ರವಲ್ಲದೆ, ಅದು ತನ್ನ ನಾಗರಿಕರಿಗೆ ನೀಡುವ ಅವಕಾಶಗಳು ಮತ್ತು ಘನತೆಯಿಂದಲೂ ಅಳೆಯಬೇಕು ಎಂಬುದನ್ನು ಇದು ಎತ್ತಿ ತೋರಿಸುತ್ತದೆ ಎಂದು ಜಿಬಿಎ ತಿಳಿಸಿದೆ.
ಜನ ಕಲ್ಯಾಣ ಮಹೋತ್ಸವವು ಒಂದು ಸಬಲೀಕರಣದ ಉಪಕ್ರಮವಾಗಿದೆ. ಜನರು ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲುವಂತೆ ಮಾಡುವುದು ಮತ್ತು ತಮ್ಮ ಕುಟುಂಬಗಳಿಗೆ ಸುರಕ್ಷಿತ ಭವಿಷ್ಯವನ್ನು ನಿರ್ಮಿಸಿಕೊಳ್ಳಲು ನೆರವಾಗುವುದು ನಮ್ಮ ಉದ್ದೇಶವಾಗಿದೆ. ಇದು ಕೇವಲ ಆರ್ಥಿಕ ಸಹಾಯವಲ್ಲ; ಬದಲಾಗಿ ಕುಟುಂಬಗಳು ಸಂಪಾದಿಸುವ, ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ಹಾಗೂ ಘನತೆ ಮತ್ತು ಸ್ವಾವಲಂಬನೆಯಿಂದ ಬದುಕುವ ಸಾಮಥ್ರ್ಯದ ಮೇಲೆ ಮಾಡುತ್ತಿರುವ ಹೂಡಿಕೆಯಾಗಿದೆ.
-ಕೃಷ್ಣ ಬೈರೇಗೌಡ, ಸಚಿವ, ಗ್ರೇಟರ್ ಬೆಂಗಳೂರು ಅಭಿವೃದ್ಧಿ






