ಅನಿವಾಸಿ ಕನ್ನಡಿಗರ ಹೊಸ ಸಚಿವಾಲಯಕ್ಕೆ ಡಾ.ಆರತಿ ಕೃಷ್ಣ ಅವರನ್ನು ನೇಮಿಸಲು ಜಾಗತಿಕ ಅನಿವಾಸಿ ಕನ್ನಡಿಗರ ಆಗ್ರಹ

ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿರುವ ಡಾ.ರೊನಾಲ್ಡ್ ಕೊಲಾಸೊ
ಬೆಂಗಳೂರು, ಜೂ.20: ರಾಜ್ಯ ಸರಕಾರ ನೂತನವಾಗಿ ಸ್ಥಾಪಿಸಲು ಮುಂದಾಗಿರುವ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯಕ್ಕೆ ಎನ್ಆರ್ಐ ಅಧ್ಯಕ್ಷರಾಗಿ ಅನುಭವ ಹೊಂದಿರುವ ವಿಧಾನ ಪರಿಷತ್ ಸದಸ್ಯೆ ಡಾ.ಆರತಿ ಕೃಷ್ಣ ಅವರನ್ನು ಸಚಿವರಾಗಿ ನೇಮಿಸಬೇಕು ಎಂದು ಜಾಗತಿಕ ಅನಿವಾಸಿ ಕನ್ನಡಿಗರು ಆಗ್ರಹಿಸಿದ್ದಾರೆ.
ಶನಿವಾರ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿವಿಧ ದೇಶಗಳ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ನಾಯಕರು, ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯಕ್ಕೆಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅನುಮೋದನೆ ನೀಡಿದ್ದು, ಈ ಸಚಿವಾಲಯ ಶೀಘ್ರವೇ ಕಾರ್ಯೋನ್ಮುಖವಾಗಬೇಕು. ಜೊತೆಗೆ, ಡಾ.ಆರತಿ ಕೃಷ್ಣ ಅವರನ್ನು ಈ ಖಾತೆಗೆ ನೇಮಕ ಮಾಡಬೇಕೆಂದು ಕೋರಿದರು.
ಈ ಕುರಿತು ನೇತೃತ್ವವಹಿಸಿ ಮಾತನಾಡಿದ ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ ಅವರು,
ಎನ್ಆರ್ಐಗಳ ಮನವಿ ಅನಿವಾಸಿ ಕನ್ನಡಿಗರ ಸಚಿವಾಲಯದ ಸಚಿವರನ್ನಾಗಿ ಕರ್ನಾಟಕ ಸರ್ಕಾರದ ಅನಿವಾಸಿ ಭಾರತೀಯ ವೇದಿಕೆ ಸದಸ್ಯೆ ಕಾರ್ಯದರ್ಶಿಯೂ ಆಗಿರುವ ವಿಧಾನಪರಿಷತ್ ಸದಸ್ಯೆ ಡಾ.ಆರತಿ ಕೃಷ್ಣ ಅವರನ್ನು ನೇಮಕ ಮಾಡಬೇಕು ಎಂದು 30 ದೇಶಗಳ 43 ಅನಿವಾಸಿ ಕನ್ನಡಿಗರ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ ನಿಯೋಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದೆ ಎಂದರು.
ಡಾ.ಆರತಿ ಕೃಷ್ಣ ಅವರು ಅಮೆರಿಕದ ಭಾರತೀಯ ರಾಯಭಾರ ಕಚೇರಿಯಲ್ಲಿ ಭಾರತೀಯ ಸಮುದಾಯ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಯುಪಿಎ ಅವಧಿಯಲ್ಲಿ ಭಾರತೀಯ ಸಾಗರೋತ್ತರ ಸಚಿವಾಲಯದ ಪ್ರಮುಖ ಹುದ್ದೆ ಅಲಂಕರಿಸಿದ್ದ ಅವರು ಉತ್ತಮ ಕೆಲಸ ಮಾಡಿದ್ದಾರೆ. ಅನಿವಾಸಿಗಳ ನಾಡಿಮಿಡಿತ ಅರಿತಿರುವ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಕಷ್ಟಕ್ಕೆ ಸದಾ ಸ್ಪಂದಿಸುವ ಅಂತರರಾಷ್ಟ್ರೀಯ ಕಾನೂನು ಹಾಗೂ ಸಮನ್ವಯದಲ್ಲಿ ಜ್ಞಾನ ಹೊಂದಿರುವ ಅವರನ್ನು ಹೊಸ ಜವಾಬ್ದಾರಿಗೆ ಪರಿಗಣಿಸಬೇಕು. ಇದರಿಂದ ಕರ್ನಾಟಕಕ್ಕೆ ಸಾಕಷ್ಟು ನೆರವು ಸಿಗಲಿದೆ. ಸಚಿವಾಲಯ ಸ್ಥಾಪನೆಯ ಉದ್ದೇಶವೂ ಈಡೇರಲಿದೆ ಎಂದು ಅವರು ತಿಳಿಸಿದರು.
ಅಮೆರಿಕ, ಬ್ರಿಟನ್, ಯೂರೋಪ್, ಕೆನಡಾ, ಆಫ್ರಿಕಾ, ಸಿಂಗಾಪುರ, ಮಲೇಷ್ಯಾ, ಸಂಯುಕ್ತ ಅರಬ್ ಸಂಸ್ಥಾನ (ಯುಎಇ), ಸೌದಿ ಅರೆಬಿಯಾ ಮತ್ತಿತರ ಗಲ್ಫ್ ರಾಷ್ಟ್ರಗಳಲ್ಲೂ ಸೇರಿದಂತೆ ವಿದೇಶಗಳಲ್ಲಿ ಕನ್ನಡಿಗರು ನೆಲೆದ್ದಾರೆ. ಉದ್ಯಮಿಗಳು, ವೈದ್ಯರು, ಎಂಜಿನಿಯರ್ಗಳು ಸೇರಿದಂತೆ ಉತ್ತಮ ಸ್ಥಾನಮಾನ ಪಡೆದ ಒಂದು ವರ್ಗ, ಚಾಲಕರು, ಮನೆ ಕೆಲಸದವರು, ಕೂಲಿ ಕಾರ್ಮಿಕರು, ಶುಶ್ರೂಷಕರು ಸೇರಿದಂತೆ ವಿವಿಧ ವೃತ್ತಿಯ ಮತ್ತೊಂದು ಶ್ರಮಿಕ ವರ್ಗ ವಿದೇಶಗಳಲ್ಲಿ ಬದುಕು ಕಟ್ಟಿಕೊಂಡಿವೆ. ಹೊಸ ಸಚಿವಾಲಯವು ಮೊದಲ ವರ್ಗದ ಸಹಕಾರ ಪಡೆದು ಆಯಾ ದೇಶಗಳ ಕಂಪನಿಗಳು, ಉದ್ಯಮಿಗಳಿಂದ ಕರ್ನಾಟಕಕ್ಕೆ ಅಗತ್ಯವಿರುವ ಬಂಡವಾಳ ಸೆಳೆಯುವುದು, ಹೂಡಿಕೆಗೆ ಮನವೊಲಿಸುವುದು,ಉದ್ಯಮದ ಬೆಳವಣಿಗೆ, ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿ, ಕೃಷಿ ಉದ್ಯಮದ ಉತ್ತೇಜನಕ್ಕೆ ಹಾಗೂ ಇತರ ಕನ್ನಡಿಗರ ಅಭಿವೃದ್ಧಿ ಕಾರ್ಯಗಳಿಗೆ, ಕರ್ನಾಟಕದ ಆರ್ಥಿಕ ಅಭಿವೃದ್ಧಿಗೆ ಸಹಕಾರ ಪಡೆಯುವ ಕೆಲಸ ಮಾಡುವ ವಿಶ್ವಾಸ ಇದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಅನಿವಾಸಿ ಕನ್ನಡಿಗರಾದ ಝಕರಿಯಾ ಜೋಕಟ್ಟೆ, ಹಿದಾಯತ್ ಅಡ್ಡೂರ್, ಮುಹಮ್ಮದ್ ಮನ್ಸೂರ್, ಅಬ್ದುಲ್ಲಾ ಮೋನು, ಡಾ.ರಶ್ಮಿ ನಂದಕಿಶೋರ್, ಹೇಮೆ ಗೌಡ, ಅಜಿತ್ ಕುಮಾರ್,ರಾಜ್ ಕುಮಾರ್, ಜೇಮ್ಸ್ ಮೆಂಡೋನ್ಸಾ, ಸತೀಶ್ ಬಜಾಲ್, ಭಾರ್ಗವ್ ಶರ್ಮಾ ಸೇರಿದಂತೆ ಪ್ರಮುಖರಿದ್ದರು.






