ರಾಜ್ಯ-ಕೇಂದ್ರ ಸರಕಾರಗಳು ಬಡಜನರ ಭೂಮಿ ಕಸಿಯುತ್ತಿವೆ : ಜಿ.ಎನ್.ನಾಗರಾಜ

ಬೆಂಗಳೂರು : ಭೂಮಾಫಿಯಾಗಳ ರಕ್ಷಣೆಗೆ ನಿಂತಿರುವ ಶಾಸಕರ ಸಂಖ್ಯೆಯೇ ಇಂದು ಹೆಚ್ಚಾಗಿದೆ. ‘ಆ ಲೇಔಟ್, ಈ ಲೇಔಟ್' ಎಂಬ ಬಣ್ಣದ ಮಾತುಗಳ ಮೂಲಕ ಬಡಜನರ ಭೂಮಿಯನ್ನು ಕಸಿಯುವ ಕೆಲಸವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಾಡುತ್ತಿವೆ ಎಂದು ಸಿಪಿಎಂ ಹಿರಿಯ ನಾಯಕ ಜಿ.ಎನ್.ನಾಗರಾಜ ಆರೋಪ ಮಾಡಿದ್ದಾರೆ.
ರವಿವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಸಿಪಿಎಂ ವತಿಯಿಂದ ಆಯೋಜಿಸಿದ್ದ ‘ಬೆಂಗಳೂರು ನಾಗರಿಕರ ಜನಾಕ್ರೋಶ ಸಮಾವೇಶ'ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರದ ಭೂಕಬಳಿಕೆ ನೀತಿಗಳ ವಿರುದ್ಧ ಜನರು ಸುಮ್ಮನೆ ಕುಳಿತಿಲ್ಲ. ರಾಜ್ಯದ ವಿವಿಧ ಭಾಗಗಳಲ್ಲಿ ನಿರಂತರ ಹೋರಾಟಗಳು ನಡೆಯುತ್ತಿವೆ. ಚನ್ನರಾಯಪಟ್ಟಣದಲ್ಲಿ ಹೋರಾಟದ ಮೂಲಕ ಭೂಮಿಯನ್ನು ಉಳಿಸಿಕೊಳ್ಳಲಾಗಿದೆ. ಬಿಡದಿ, ದೊಡ್ಡಬೆಳವಂಗಲ, ಆನೇಕಲ್‍ನಲ್ಲಿ ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ಜನಾಂದೋಲನಗಳು ನಡೆಯುತ್ತಿವೆ ಎಂದರು.
ಎಸ್‍ಐಆರ್ ಹೆಸರಿನಲ್ಲಿ ಬಡವರು, ತಳಸಮುದಾಯಗಳು, ಮಹಿಳೆಯರು ಹಾಗೂ ದುಡಿಯುವ ವರ್ಗದ ಜನರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಸಂಚು ನಡೆಯುತ್ತಿದೆ. ಚುನಾವಣಾ ಆಯೋಗವು ಬಿಜೆಪಿ ಸರಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ. ರಾಜ್ಯದಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಅವರನ್ನು ಕಡಿಮೆ ವೇತನಕ್ಕೆ ದುಡಿಸಿಕೊಳ್ಳಲಾಗುತ್ತಿದೆ. ಉದ್ಯೋಗ ಸೃಷ್ಟಿಸುವಲ್ಲಿ ಸರಕಾರ ವಿಫಲವಾಗಿರುವುದೇ ವಲಸೆಗೆ ಪ್ರಮುಖ ಕಾರಣ ಎಂದು ನಾಗರಾಜ ತಿಳಿಸಿದರು.
ಬೆಂಗಳೂರು ದಕ್ಷಿಣದ ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಮಂಜುನಾಥ ಮಾತನಾಡಿ, ಬಿಬಿಎಂಪಿಯಿಂದ ಗ್ರೇಟರ್ ಬೆಂಗಳೂರು ಎಂದು ಬದಲಾಯಿಸಲಾಗಿದೆ ವಿನಃ, ನಗರದ ಸಮಸ್ಯೆಗಳು ಬದಲಾಗಿಲ್ಲ. ನಗರವನ್ನು ಐದು ನಗರ ಪಾಲಿಕೆಗಳಾಗಿ ವಿಂಗಡಿಸಿದೆಯಾದರೂ, ಅವು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಆರು ವರ್ಷಗಳಿಂದ ಚುನಾವಣೆಗಳನ್ನು ನಡೆಸದೇ, ಸಲ್ಲದ ಕಾರಣಗಳನ್ನು ಮುಂದೊಡ್ಡಿ ಮುಂದೂಡುತ್ತಲೇ ಬರಲಾಗಿದೆ ಎಂದು ಹೇಳಿದರು.
ನಾಗರಿಕ ಸೌಲಭ್ಯಗಳನ್ನು ನೀಡುವಲ್ಲಿ ತಾರತಮ್ಯವಿದೆ. ಬಡವರು, ಅಸಂಘಟಿತ ಕಾರ್ಮಿಕರು, ಸಾಮಾನ್ಯ ಜನ ವಾಸಮಾಡುವ ಪ್ರದೇಶಗಳಿಗೆ ಮೂಲಸೌಕರ್ಯಗಳನ್ನು ನೀಡಲು ನಿರ್ಲಕ್ಷ್ಯ ಧೋರಣೆ ಇದೆ. ಆದರೆ ಪ್ರತಿಷ್ಠಿತರು ವಾಸಿಸುವ ಬಡಾವಣೆಗಳಿಗೆ ಸಕಲ ಸೌಕರ್ಯಗಳೂ ಕೇಳದೆಯೂ ದಕ್ಕುತ್ತವೆ. ಇಂತಹ ತಾರತಮ್ಯ ಧೋರಣೆ ಆಡಳಿತದಲ್ಲಿ ಬೇರೂರಿದೆ ಎಂದು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯದರ್ಶಿ ಮಂಡಳಿ ಸದಸ್ಯ ಗೋಪಾಲಕೃಷ್ಣ ಅರಳಹಳ್ಳಿ ಮಾತನಾಡಿ, ಬಿ ಖಾತಾ ಆಸ್ತಿಗಳನ್ನು ಎ ಖಾತಾಗೆ ಪರಿವರ್ತಿಸಲು ದುಬಾರಿ ದಂಡ ವಿಧಿಸಲಾಗಿದೆ. ನೀರಿನ ದರ ಏರಿಕೆ ಪ್ರಸ್ತಾಪ, ಬಿಎಂಟಿಸಿ ಮತ್ತು ಕೆಎಸ್ಸಾರ್ಟಿಸಿ ಏರಿಕೆ ಪ್ರಸ್ತಾಪಗಳು ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಗಾಯದ ಮೇಲಿನ ಬರೆ ಆಗಲಿದೆ ಎಂದು ತಿಳಿಸಿದರು.
ಸಮಾವೇಶದಲ್ಲಿ ಸಿಪಿಎಂ ಮುಖಂಡರಾದ ಪ್ರತಾಪಸಿಂಹ, ಗೋಪಾಲಗೌಡ, ಗೌರಮ್ಮ, ಶಶಿಕಲಾ, ನಾಗರಾಜ, ಚಂದ್ರಶೇಖರ್ ಕೆ.ಎಸ್., ನರಸಿಂಹಮೂರ್ತಿ, ಲಿಂಗರಾಜ, ಹುಳ್ಳಿ ಉಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.






