ಹಿರಿಯ ಪತ್ರಕರ್ತ ಜಿ.ಎನ್.ಮೋಹನ್‌ಗೆ ರಾಷ್ಟ್ರೀಯ ಮಾಧ್ಯಮ ಪ್ರಶಸ್ತಿ

ಬೆಂಗಳೂರು : ಮುಂಬೈನ ಕನ್ನಡಿಗ ಪತ್ರಕರ್ತರ ಸಂಘ ನೀಡುವ ರಾಷ್ಟ್ರೀಯ ಮಾಧ್ಯಮ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಭಾಜನರಾಗಿದ್ದಾರೆ.
ಬುಧವಾರ ಈ ಕುರಿತು ಪ್ರಕಟಣೆ ನೀಡಿರುವ ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸವಿತಾ ಸುರೇಶ್ ಶೆಟ್ಟಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಡಾ.ಶಿವ ಮೂಡಿಗೆರೆಯವರು, ಹಿರಿಯ ಪತ್ರಕರ್ತ ಕೆ.ಟಿ.ವೇಣುಗೋಪಾಲ್ ಅವರ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಡಾ.ಸುನೀತಾ ಎಂ. ಶೆಟ್ಟಿ ಅವರ ನೇತೃತ್ವದ ಆಯ್ಕೆ ಸಮಿತಿಯು ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಅವರನ್ನು ಈ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ತಿಳಿಸಿದ್ದಾರೆ.
ಪ್ರಶಸ್ತಿಯು 25ಸಾವಿರ ರೂ.ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದ್ದು, ಆಗಸ್ಟ್ 1ರಂದು ಮುಂಬೈನ ಅಂಧೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಜಿ.ಎನ್.ಮೋಹನ್ ಅವರು ಕನ್ನಡ ಮಾಧ್ಯಮ ಲೋಕದ ಪ್ರಮುಖರಲ್ಲೊಬ್ಬರು. ಪತ್ರಿಕೆ. ಇಲೆಕ್ಟ್ರಾನಿಕ್ ಹಾಗೂ ಆನ್‌ಲೈನ್ ಮೂರೂ ಮಾಧ್ಯಮಗಳಲ್ಲಿ ನುರಿತರು, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಮೊದಲ ರ್ಯಾಂಕ್ ಹಾಗೂ ಎರಡು ಚಿನ್ನದ ಪದಕಗಳೊಂದಿಗೆ ಪದವಿ ಪಡೆದವರು. ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಜಿ.ಎನ್.ಮೋಹನ್ ‘ಪ್ರಜಾವಾಣಿ’ಯ ವರದಿಗಾರರಾಗಿ, ‘ಈಟಿವಿ’ಯ ಸುದ್ದಿ ವಿಭಾಗದ ಮುಖ್ಯಸ್ಥರಾಗಿ, ನಂತರ ‘ಈಟಿವಿ’ ಸುದ್ದಿ ವಾಹಿನಿಯ ಹಿರಿಯ ಸಂಪಾದಕರಾಗಿ, ‘ಸಮಯ’ ಚಾನಲ್ ಹಾಗೂ ‘ಆವಧಿ’ಯ ಪ್ರಧಾನ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಸಾಹಿತ್ಯ ಹಾಗೂ ರಂಗಭೂಮಿಗೆ ನೀಡಿದ ಇವರ ಕೊಡುಗೆಗಾಗಿ ಕರ್ನಾಟಕ ಸಾಹಿತ್ಯ ಅಕಾಡಮಿ ಸಾಹಿತ್ಯಶ್ರೀ ಪ್ರಶಸ್ತಿ ಹಾಗೂ ಕರ್ನಾಟಕ ನಾಟಕ ಅಕಾಡಮಿ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.






