ಎಸ್‍ಸಿ, ಎಸ್‍ಟಿ ದೌರ್ಜನ್ಯ ತಡೆ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚಿಸಿ : ಪೊಲೀಸರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೂಚನೆ

ಬೆಂಗಳೂರು : ಎಸ್‍ಸಿ, ಎಸ್‍ಟಿ ದೌರ್ಜನ್ಯ ತಡೆ ಪ್ರಕರಣಗಳ ಶಿಕ್ಷೆ ಪ್ರಮಾಣ ಶೇ.2ರಷ್ಟಿದೆ. ಈ ಪ್ರಕರಣಗಳಲ್ಲಿ ಕೂಡಲೇ ಚಾರ್ಜ್‍ಶೀಟ್ ದಾಖಲಿಸದೆ ಸಾಕ್ಷ್ಯ ನಾಶಕ್ಕೆ ಕಾರಣವಾಗುತ್ತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಹೆಚ್ಚಿನ ಗಮನಹರಿಸಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೂಚಿಸಿದ್ದಾರೆ.
ಶುಕ್ರವಾರ ನಗರದ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಮತ್ತು ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ಎಸ್‍ಸಿ, ಎಸ್‍ಟಿ ಸಮುದಾಯಗಳ ಜನರೊಂದಿಗೆ ಕಾಟಾಚಾರಕ್ಕೆ ಸಭೆಗಳನ್ನು ಮಾಡುವುದು ಸರಿಯಲ್ಲ. ಶೋಷಿತರು, ಬಡವರ ಸಮಸ್ಯೆಗಳನ್ನು ಬಗೆಹರಿಸುವುದರಿಂದ ನೀವು ಏನನ್ನು ಕಳೆದುಕೊಳ್ಳುತ್ತೀರಿ? ಎಂದು ಜಿ.ಪರಮೇಶ್ವರ್ ಪ್ರಶ್ನಿಸಿದರು.
ಸರಕಾರಕ್ಕೆ ಪೊಲೀಸ್ ಇಲಾಖೆ ಬಹಳ ಮುಖ್ಯ. ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಸರಿಯಾಗಿ ಮಾಡದೆ ಹೋದರೆ, ಎಂತಹ ಸಮಾಜ ಆಗುತ್ತದೆ ಎಂಬುದರ ಬಗ್ಗೆಯೂ ಯೋಚಿಸಬೇಕು. ಎಲ್ಲ ಇಲಾಖೆಗಳಿಗಿಂತಲೂ ಬಹಳ ದೊಡ್ಡ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ. ಇದನ್ನು ಅರಿತುಕೊಳ್ಳಬೇಕಿದೆ ಎಂದು ಜಿ.ಪರಮೇಶ್ವರ್ ತಿಳಿಸಿದರು.
ಇತ್ತೀಚೆಗೆ ಖಾಸಗಿ ಸಂಸ್ಥೆಯೊಂದರ ಸಮೀಕ್ಷೆ ವರದಿ ಪ್ರಕಾರ, ನ್ಯಾಯ ಒದಗಿಸುವುದರಲ್ಲಿ ಕರ್ನಾಟಕ ಪೊಲೀಸ್ ಮೊದಲ ಸ್ಥಾನದಲ್ಲಿದೆ. ಇದು ಸಂತೋಷದ ವಿಚಾರ. ಆದರೆ, ಸಮೀಕ್ಷೆ ವರದಿಯಿಂದ ನಮ್ಮ ಬೆನ್ನು ನಾವೇ ತಟ್ಟಿಕೊಂಡು ಸಮಾದಾನಪಟ್ಟುಕೊಂಡು ಸುಮ್ಮನಿರಲು ಆಗುವುದಿಲ್ಲ. ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾದ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲಿದೆ ಎಂದು ಜಿ.ಪರಮೇಶ್ವರ್ ಹೇಳಿದರು.
ಪೊಲೀಸ್ ಠಾಣೆಗಳಿಗೆ ಅನುಕೂಲಸ್ಥರಷ್ಟೇ ಬರುವುದಿಲ್ಲ. ಬಡವರು, ಶೋಷಿತರು ಕಷ್ಟ ಹೇಳಿಕೊಂಡು ಬರುತ್ತಾರೆ. ದೂರು ತೆಗೆದುಕೊಳ್ಳಲಿಲ್ಲ, ನಿಂದಿಸಿ ಕಳಿಸಿದರು ಎಂದು ದಿನನಿತ್ಯ ನಮ್ಮ ಮುಂದೆ ಅಳಲು ತೋಡಿಕೊಳ್ಳುತ್ತಾರೆ. ಇದನ್ನು ಸರಿಪಡಿಸಿಕೊಳ್ಳಬೇಕು. ದೇಶದಲ್ಲಿ ಕ್ರೈಂ ರೇಟಿಂಗ್‍ನಲ್ಲಿ ಕರ್ನಾಟಕ 15ನೇ ಸ್ಥಾನದಲ್ಲಿದೆ. 20ನೇ ಸ್ಥಾನಕ್ಕೆ ಹೋಗಬೇಕು. ಅಪರಾಧ ಪ್ರಮಾಣ ಇಳಿಮುಖವಾಗಬೇಕು ಎಂದು ಜಿ.ಪರಮೇಶ್ವರ್ ಸೂಚಿಸಿದರು.
ಕಾಲೇಜು ವಿದ್ಯಾರ್ಥಿಗಳಿಗೆ ಸುಲಭವಾಗಿ ಗಾಂಜಾ ಸಿಗುತ್ತಿದೆ. ಪೆಡ್ಲರ್‍ನನ್ನು ಮಾತ್ರ ಹಿಡಿದು, ಮಾದಕ ದ್ರವ್ಯ ಸೇವಿಸಿರುವವರನ್ನು ಪ್ರಕರಣದಿಂದ ಕೈ ಬಿಡುವುದು ಸರಿಯಲ್ಲ. ಡ್ರಗ್ಸ್ ಸಂಪೂರ್ಣವಾಗಿ ನಿಯಂತ್ರಿಸದೇ ಹೋದರೆ, ಮುಂದಿನ ದಿನಗಳಲ್ಲಿ ನಾವು ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಜಿ.ಪರಮೇಶ್ವರ್ ಆತಂಕ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ ಹೆಚ್ಚಾಗಿದೆ. ಇದನ್ನು ನಿರ್ಲಕ್ಷಿಸಿ, ನಿಯಂತ್ರಿಸದೇ ಹೋದರೆ ತೊಂದರೆಗಳಾಗುತ್ತವೆ. ಅಕ್ರಮ ವಲಸಿಗರ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಜಿ.ಪರಮೇಶ್ವರ್ ತಿಳಿಸಿದರು.
ಇದೇ ವೇಳೆಯಲ್ಲಿ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕಮಾಂಡ್ ಸೆಂಟರ್ ಸ್ಥಾಪನೆಗೆ 50 ಕೋಟಿ ರೂ. ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಜಿ.ಪರಮೇಶ್ವರ್ ಮನವಿ ಮಾಡಿದರು.
ಕೋಮು ಹಿಂಸೆ ನಿಗ್ರಹ ಪಡೆಯ ಯಶಸ್ವಿಗೊಳಿಸಬೇಕು: ಕೋಮು ಹಿಂಸೆ ನಿಗ್ರಹ ಪಡೆಯನ್ನು ಬಹಳ ಒಳ್ಳೆಯ ಉದ್ದೇಶ ಇಟ್ಟುಕೊಂಡು ಸ್ಥಾಪಿಸಲಾಗಿದೆ. ಇದನ್ನು ಯಶಸ್ವಿಗೊಳಿಸಲೇಬೇಕು. ಇದರ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಮುನ್ನಡೆಸಬೇಕು. ಕೋಮು ಪ್ರಚೋಧನೆ ಮಾಡುವವರಿಗೆ ಭಯ ಹುಟ್ಟಬೇಕು ಎಂದು ಜಿ.ಪರಮೇಶ್ವರ್ ತಿಳಿಸಿದರು.







