ಪಂಚಾಯ್ತಿಗಳ ಆರ್ಥಿಕ ಸದೃಢತೆಗೆ ಅನುದಾನ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಗ್ರಾ.ಪಂ., ತಾ.ಪಂ.ಮತ್ತು ಜಿ.ಪಂ. ಆರ್ಥಿಕವಾಗಿ ಸಧೃಢವಾಗಲು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಹಣಕಾಸು ಆಯೋಗಗಳ ಶಿಫಾರಸ್ಸಿನಂತೆ ಅನುದಾನ ನೀಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬುಧವಾರ ಪರಿಷತ್ತಿನ ಸದಸ್ಯ ಮಂಜುನಾಥ್ ಭಂಡಾರಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ 15ನೆ ಹಣಕಾಸು ಆಯೋಗದ ಅನುದಾನವನ್ನು ಶೇ.90ರಷ್ಟು ಜನಸಂಖ್ಯೆ ಮತ್ತು ಶೇ.10ರಷ್ಟು ಭೌಗೋಳಿಕ ಪ್ರದೇಶದ ಆಧಾರದ ಮೇಲೆ ಬಿಡುಗಡೆಗೊಳಿಸಲಾಗುತ್ತಿದ್ದು, ಪ್ರತಿ ಗ್ರಾ.ಪಂ.ಗೆ ಸರಾಸರಿ 15 ಲಕ್ಷ ರೂ., ತಾಲ್ಲೂಕು ಪಂಚಾಯತಿಗಳಿಗೆ ಸರಾಸರಿ 11ಲಕ್ಷ ರೂ. ಮತ್ತು ಜಿಲ್ಲಾ ಪಂಚಾಯತಿಗಳಿಗೆ ಸರಾಸರಿ 1.50ಕೋಟಿ ರೂ. ಅನುದಾನ ನೀಡಲಾಗುತ್ತಿದೆ ಎಂದರು.
ರಾಜ್ಯ ಹಣಕಾಸು ಆಯೋಗದ ಶಿಫಾರಸ್ಸಿನಂತೆ ತಾಲೂಕು ಪಂಚಾಯತಿಗಳಿಗೆ ಅಭಿವೃದ್ಧಿ ಅನುದಾನವನ್ನು ಶೇ.80 ರಷ್ಟು ಜನಸಂಖ್ಯೆ ಮತ್ತು ಶೇ.20ರಷ್ಟು ಭೌಗೋಳಿಕ ಪ್ರದೇಶದ ಆಧಾರದ ಮೇಲೆ ಬಿಡುಗಡೆಗೊಳಿಸಲಾಗುತ್ತಿದ್ದು, ರಾಜ್ಯ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಗ್ರಾಮ ಪಂಚಾಯತಿಗಳಿಗೆ ವಾರ್ಷಿಕವಾಗಿ ಸರಾಸರಿ 20 ಲಕ್ಷ ರೂ., ಪ್ರತಿ ತಾಲ್ಲೂಕು ಪಂಚಾಯತಿಗೆ ಸರಾಸರಿ 2 ಕೋಟಿ ರೂ. ಮತ್ತು ಜಿಲ್ಲಾ ಪಂಚಾಯತಿಗಳಿಗೆ ಸರಾಸರಿ 4 ಕೋಟಿ ರೂ. ಅನುದಾನ ನೀಡಲಾಗುತ್ತಿದೆ ಎಂದರು.
ಗ್ರಾಮ ಪಂಚಾಯತಿಗಳ ಭೂಮಿ ಮತ್ತು ಕಟ್ಟಡಗಳ ಮೇಲೆ ಮತ್ತು ನೀರಿನ ಮೇಲೆ ತೆರಿಗೆ ವಿಧಿಸಿ ಸಂಪನ್ಮೂಲ ಕ್ರೋಢೀಕರಿಸಲು ಅವಕಾಶ ಕಲ್ಪಿಸಲಾಗಿದೆ. ಗ್ರಾಮ ಪಂಚಾಯತಿಗಳಲ್ಲಿ ತೆರಿಗೆ ವಸೂಲಾತಿಯ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಸಲುವಾಗಿ ತೆರಿಗೆ, ದರ ಮತ್ತು ಇತರೆ ಫೀಜುಗಳನ್ನು ವಸೂಲಾತಿ ಮಾಡಲು ಪ್ರತಿ ಗ್ರಾಮ ಪಂಚಾಯತಿಗೆ ಅಂಡ್ರೋಯ್ಡ್ ಸಾಧನ ನೀಡಲಾಗಿದೆ. ಹೀಗಾಗಿ ಪ್ರಸಕ್ತ ವರ್ಷದಲ್ಲಿ ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯತಿಗಳ 1500 ಪಂಚಾಯತಿ ಅಭಿವೃದ್ಧಿ ಅಧಿಕಾರಿಹುದ್ದೆಗಳನ್ನು ಗ್ರೂಪ್-ಬಿ ವೃಂದದ ಹಿರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳೆಂದು ಉನ್ನತೀಕರಿಸಿ ಮರುಪದನಾಮೀಕರಿಸಿ ಆದೇಶ ಹೊರಡಿಸಲಾಗಿದೆ. ರಾಜ್ಯದ ಪ್ರತಿ ಗ್ರಾಮ ಪಂಚಾಯತಿಗೆ ಒಂದು ಡಾಟಾ ಎಂಟ್ರಿ ಅಪರೇಟರ್ ಹುದ್ದೆಯನ್ನು ನಿಗಧಿಪಡಿಸಿದ್ದು, ಈ ಹುದ್ದೆಗೆ ಆಯ್ಕೆ ಮಾಡಿ ನೇಮಕಾತಿ ಮಾಡಲು ಮತ್ತು ನೇಮಕಾತಿ ಹೊಂದಿದ ನೌಕರರಿಗೆ ಬಾಪೂಜಿ ಸೇವಾ ಕೇಂದ್ರದಲ್ಲಿ ಸಂಗ್ರಹವಾಗುವ ಮೊತ್ತದಿಂದ ವೇತನವನ್ನು ಪಾವತಿಸಲು ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದರು.
ಗ್ರಾಮ ಪಂಚಾಯತಿ ಸದಸ್ಯರುಗಳಿಗೆ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ವತಿಯಿಂದ 2021 ರಲ್ಲಿ 5 ದಿನಗಳ ತರಬೇತಿ ಮತ್ತು 2022 ರಲ್ಲಿ ದೂರದೃಷ್ಟಿ, ಯೋಜನೆಯ ಬಗ್ಗೆ, 3 ದಿನಗಳ ತರಬೇತಿ ನೀಡಲಾಗಿದೆ. ಪ್ರಸ್ತುತ ಮಹಿಳಾ ಚುನಾಯಿತ ಪ್ರತಿನಿಧಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.







