ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಗೆ ಸಲಹೆ ಸ್ವೀಕಾರ | ಮೂರು ದಿನಗಳ ಕಾಲ ಐದು ಕಡೆ ಸಭೆ

ಬೆಂಗಳೂರು : ‘ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ-2024’ರಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಕುರಿತು ನಗರದಲ್ಲಿ 3 ದಿನಗಳ ಕಾಲ ನಗರದ 5 ಕಡೆ ಎಲ್ಲ ಎಂಟು ವಲಯಗಳನ್ನು ಒಳಗೊಂಡಂತೆ ಸಾರ್ವಜನಿಕರು, ಸಂಘ-ಸಂಸ್ಥೆಗಳಿಂದ ಸಲಹೆಗಳನ್ನು ಸ್ವೀಕರಿಸುವ ಸಭೆಗಳನ್ನು ಆಯೋಜನೆ ಮಾಡಲಾಗುತ್ತಿದೆ.
ಫೆ.10ರಂದು ವಸಂತನಗರ ತಿಮ್ಮಯ್ಯ ರಸ್ತೆಯಲ್ಲಿ ಬರುವ ಬಂಜಾರ ಭವನದಲ್ಲಿ, ಕೆ.ಆರ್.ಪುರಂನ ಟಿಸಿ ಪಾಳ್ಯದ ಹತ್ತಿರವಿರುವ ಕೇಂಬ್ರಿಡ್ಜ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಭೆ ಆಯೋಜಿಸಲಾಗಿದೆ. ಫೆ.11ರಂದು ಜೆ.ಪಿ.ನಗರ 1ನೇ ಹಂತದಲ್ಲಿರುವ ಆರ್.ವಿ ಡೆಂಟಲ್ ಕಾಲೇಜಿನಲ್ಲಿ, ಬೆಂಗಳೂರು ವಿವಿಯ ಜ್ಞಾನಭಾರತಿ ಕ್ಯಾಂಪಸ್‍ನಲ್ಲಿರುವ ಡಾ.ಎಚ್.ಎನ್.ಸಭಾಂಗಣದಲ್ಲಿ, ಫೆ.12ರಂದು ಯಲಹಂಕ ಉಪನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಭೆಯನ್ನು ಆಯೋಜಿಸಲಾಗಿದೆ.
ಹಾಗೆಯೇ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024ರ ಪರಿಶೀಲನೆ ಮತ್ತು ವರದಿಗೆ ಸಂಬಂಧಿಸಿದಂತೆ ಕರ್ನಾಟಕ ವಿಧಾನಮಂಡಲ ಜಂಟಿ ಪರಿಶೀಲನಾ ಸಮಿತಿಯನ್ನು ರಚಿಸಲಾಗಿದ್ದು, ಆ ಸಮಿತಿಗೆ ಶಿವಾಜಿನಗರ ಕ್ಷೇತ್ರದ ಶಾಸಕ ರಿಝ್ವಾನ್ ಅರ್ಶದ್ ಅವರನ್ನು ಅಧ್ಯಕ್ಷರನ್ನಾಗಿ ನಿಯೋಜನೆ ಮಾಡಲಾಗಿದೆ ಎಂದು ಬಿಬಿಎಂಪಿ ಪ್ರಕಟನೆಯಲ್ಲಿ ತಿಳಿಸಿದೆ.





