ಕರ್ನಾಟಕ ವಿಧಾನಸಭಾಧ್ಯಕ್ಷರಾಗಿ ಜಿ.ಎಸ್.ಪಾಟೀಲ್ ಅವಿರೋಧ ಆಯ್ಕೆ

ಬೆಂಗಳೂರು, ಆ.14: ಕರ್ನಾಟಕ ವಿಧಾನಸಭಾಧ್ಯಕ್ಷರಾಗಿ ಗುರುಪಾದಗೌಡ ಸಂಗನಗೌಡ ಪಾಟೀಲ (ಜಿ.ಎಸ್.ಪಾಟೀಲ್) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಧಾನಸಭಾ ಅಧಿವೇಶನದ 2ನೇ ದಿನವಾದ ಶುಕ್ರವಾರ ವಿಧಾನಸಭಾಧ್ಯಕ್ಷರ ಆಯ್ಕೆ ನಡೆಯಿತು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸ್ಪೀಕರ್ ಸ್ಥಾನಕ್ಕೆ ಜಿ.ಎಸ್.ಪಾಟೀಲರ ಹೆಸರನ್ನು ಸೂಚಿಸಿದರು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅನುಮೋದಿಸಿದರು.
ಸ್ಪೀಕರ್ ಸ್ಥಾನಕ್ಕೆ ಜಿ.ಎಸ್.ಪಾಟೀಲ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರು ಸರ್ವಾನುಮತದಿಂದ ಆಯ್ಕೆಯಾದರು.
ಹಂಗಾಮಿ ಸ್ಪೀಕರ್ ಟಿ.ಬಿ.ಜಯಚಂದ್ರ ಅವರ ಆದೇಶ ಅನುಸಾರ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಸ್ಪೀಕರ್ ಪೀಠದ ಬಳಿಗೆ ಜಿ.ಎಸ್.ಪಾಟೀಲ್ ಅವರನ್ನು ಕರೆತಂದರು. ಬಳಿಕ ಶುಭಾಶಯ ಕೋರಲಾಯಿತು.
ನೂತನ ಸ್ಪೀಕರ್ ಪರಿಚಯ
ರೋಣ ಕ್ಷೇತ್ರದ ಪ್ರಭಾವಿ ನಾಯಕ, ಶಾಸಕರಾದ ಗುರುಪಾದಗೌಡ ಸಂಗನಗೌಡ ಪಾಟೀಲ್ (ಜಿ.ಎಸ್.ಪಾಟೀಲ) 1948ರ ಎಪ್ರಿಲ್ 10ರಂದು ಜನಿಸಿದರು. ಇವರ ತಂದೆ ಸಂಗನಗೌಡ ಹಾಗೂ ತಾಯಿ ಬಸಮ್ಮ.
ಕಾಂಗ್ರೆಸ್ ಪಕ್ಷದ ಮೂಲಕ ಸಕ್ರಿಯ ರಾಜಕೀಯ ಪ್ರವೇಶಿಸಿದ ಜಿ.ಎಸ್.ಪಾಟೀಲ, ಸ್ಥಳೀಯ ಸಂಸ್ಥೆಗಳಿಂದ ಹಿಡಿದು ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಒಟ್ಟು ನಾಲ್ಕು ಬಾರಿ ರೋಣ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ರೋಣ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳು, ಗ್ರಾಮೀಣ ಭಾಗಗಳಿಗೆ ಕುಡಿಯುವ ನೀರಿನ ಪೂರೈಕೆ ಶ್ರಮಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
1983ರಲ್ಲಿ ರಾಜಕೀಯ ಪ್ರವೇಶ ಪಡೆದ ಅವರು, ರೋಣ ಪಟ್ಟಣ ಪಂಚಾಯತ್ ಮತ್ತು ಎಪಿಎಂಸಿ ಸವಡಿ ಮತ ಕ್ಷೇತ್ರದಿಂದ ಏಕಕಾಲಕ್ಕೆ ಚುನಾಯಿತರಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದರು. 1989ರಲ್ಲಿ ರೋಣ ಮತ ಕ್ಷೇತ್ರದಿಂದ ಜಯಿಸಿ ವಿಧಾನಸಭೆಗೆ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದರು.
1989ರ ಶಾಸಕತ್ವದ ಅವಧಿಯಲ್ಲಿ ವಿರೇಂದ್ರ ಪಾಟೀಲ್, ಬಂಗಾರಪ್ಪ, ವೀರಪ್ಪ ಮೊಯ್ಲಿ ಮೂವರು ಮುಖ್ಯಮಂತ್ರಿಗಳೊಂದಿಗೆ ಹೊಂದಿದ ಉತ್ತಮ ಬಾಂಧ್ಯವದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿಯೆ ಅತೀ ಹಿಂದುಳಿದ ರೋಣ ಮತಕ್ಷೇತ್ರದಲ್ಲಿ ಉತ್ತಮ ಅಭಿವೃದ್ದಿ ಕೆಲಸ ಕೈಗೊಂಡು ಗ್ರಾಮೀಣ ಪ್ರದೇಶದಲ್ಲಿ ವಿದ್ಯುಚ್ಚಕ್ತಿ, ಕುಡಿಯುವ ನೀರು, ಶಿಕ್ಷಣ ಆರೋಗ್ಯ, ಕೃಷಿ, ರಸ್ತೆ ಅಭಿವೃದ್ದಿ, ಸೇತುವೆ ನಿರ್ಮಾಣ, ಮಹಿಳೆಯರ ಸಬಲೀಕರಣ, ಮುಂತಾದ ಜನಪರ ಕಾರ್ಯಕ್ರಮ ಕೈಗೊಂಡು ಉತ್ತಮ ಜನನಾಯಕ ಎಂದು ಗುರುತಿಸಿಕೊಂಡಿದ್ದಾರೆ.
1995-1999ವರೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಕಾಂಗ್ರೆಸ್ ಪಕ್ಷದ ಸಂಘಟನೆ ಕೈಗೊಂಡು ಕೆಲಸ ಮಾಡಿದರು.
ಶೈಕ್ಷಣಿಕವಾಗಿ ಹಿಂದುಳಿದ ರೋಣದಂತಹ ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿ 'ರಾಜೀವ್ ಗಾಂಧಿ ಎಜುಕೇಷನ್ ಸೊಸೈಟಿ' ಸ್ಥಾಪಿಸಿ ಬಿ.ಎ.ಎಂ.ಎಸ್, ಬಿ.ಪಿ.ಎಡ್, ಐಟಿಐ, ಕಾಲೇಜು ಪ್ರಾರಂಬಿಸಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಒದಗಿಸಿದರು.
1999ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 29,000 ಮತಗಳ ಅಂತರದಿಂದ ಜಯಬೇರಿ ಭಾರಿಸಿ 2ನೇ ಬಾರಿಗೆ ಶಾಸಕರಾದರು. ಮಲಪ್ರಭಾ ನದಿಯಿಂದ ಚೋಳಚಗುಡ್ಡ ಬ್ಯಾರೇಜ್ ನಿರ್ಮಿಸಿ ರೋಣ ನಗರಕ್ಕೆ ಪ್ರಪ್ರಥಮ ಬಾರಿಗೆ ಶುದ್ಧ ಕುಡಿಯುವ ನೀರು ಪೊರೈಕೆಗೆ ಚಾಲನೆ ನೀಡಿದರು.
ಮೇಲ್ಮಠ, ತಳ್ಳಿಹಾಳ, ಮಾಡಲಗೇರಿ, ಚಿಕ್ಕಅಳಗುಂಡಿ, ಬಾಸಾಲಾಪೂರ ಗ್ರಾಮಗಳ ಗ್ರಾಮೀಣ ರಸ್ತೆ ಸುಧಾರಿಸಿ ಪ್ರಪ್ರಥಮ ಬಾರಿಗೆ ಬಸ್ ಸಂಚಾರ ಆರಂಬಿಸಿದ ಕೀರ್ತಿ ಜಿ.ಎಸ್ ಪಾಟೀಲರಿಗೆ ಸಲ್ಲುತ್ತದೆ. ರೋಣ, ಗಜೇಂದ್ರಗಡ, ನರೇಗಲ್ ಸರಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಿ ಹಿರೇಹಾಳ, ಶಾಂತಗಿರಿ, ನರೇಗಲ್, ನಿಡಗುಂದಿಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಿಸಿ ಜನರಿಗೆ ಆರೋಗ್ಯ ಸೇವೆ ಕಲ್ಪಿಸಿದರು.






