ವಿಧಾನಸಭೆಯಲ್ಲಿ ಎರಡನೇ ದಿನವೂ ಮುಂದುವರೆದ ಗ್ಯಾರೆಂಟಿ ಗದ್ದಲ

ಬೆಂಗಳೂರು: ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರ ನೇಮಕ ಕುರಿತು ಪ್ರತಿಪಕ್ಷಗಳು ಎರಡನೇ ದಿನವೂ ಧರಣಿ ಮುಂದುವರೆಸಿದ್ದರಿಂದ ವಿಧಾನಸಭೆಯ ಯಾವುದೇ ಕಾರ್ಯಕಲಾಪಗಳು ನಡೆಯದೆ, ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.
ಬುಧವಾರ ಬೆಳಗ್ಗೆ ಸದನ ಸೇರುತ್ತಿದ್ದಂತೆಯೇ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು, ಸಭಾಧ್ಯಕ್ಷರ ಸದನದ ಬಾವಿಗೆ ಇಳಿದು ಧರಣಿ ಮುಂದುವರೆಸಿ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ಆಗ ಸ್ಪೀಕರ್ ಯು.ಟಿ.ಖಾದರ್ ಅವರು, ಧರಣಿ ವಾಪಸ್ ಪಡೆದು ಕಲಾಪ ನಡೆಯಲು ಅವಕಾಶ ಮಾಡಿಕೊಡಿ, ಸರಕಾರ ನಿನ್ನೆಯೇ ಉತ್ತರಿಸಿದ್ದು, ಸದಸ್ಯರು ಸಹಕರಿಸಿ ಎಂದರು.
ಇದಕ್ಕೆ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಕ ಮಾಡುವ ಮೂಲಕ ಶಾಸಕರನ್ನು ಅವಮಾನಿಸಲಾಗಿದೆ. ಪಕ್ಷದ ಕಾರ್ಯಕರ್ತರನ್ನು ಸರ್ಕಾರಿ ಗ್ಯಾರಂಟಿ ಸಮಿತಿಗೆ ನೇಮಕ ಮಾಡಿ, ವೇತನ ನೀಡುತ್ತಿರುವುದು ಕಾನೂನುಬಾಹಿರ, ಇದಕ್ಕೆ ನಮ್ಮ ಆಕ್ಷೇಪಣೆಯೇ ಹೊರತು, ಸದನ ನಿಲ್ಲಿಸುವುದಕ್ಕಲ್ಲ. ನಮಗೂ ಕಲಾಪ ನಡೆಯಬೇಕಿದೆ ಎಂದು ಹೇಳಿದರು.
ನಿನ್ನೆಯಿಂದ ಈ ವಿಷಯವಾಗಿ ಕಲಾಪಕ್ಕೆ ಅಡ್ಡಿಯಾಗಿದೆ. ರಾಜ್ಯದ ಹಿತದೃಷ್ಟಿಯಿಂದ ಇದು ಒಳ್ಳೆಯದಲ್ಲ. ಬಜೆಟ್ ಅಧಿವೇಶನದ ಉಳಿದ ಕಲಾಪಗಳು, ವಿಶೇಷವಾಗಿ ಚರ್ಚೆ ಮತ್ತು ಜನರ ಸಮಸ್ಯೆಗಳ ಚಿಂತನೆ ನಡೆಸಬೇಕಾಗಿರುವುದು ಅಗತ್ಯವಾಗಿದೆ. ಹಾಗಾಗಿ, ಸರಕಾರ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು. ಪ್ರತಿಪಕ್ಷದ ಧರಣಿ ಅಂತ್ಯ ಕಾಣಬೇಕು ಎಂದು ಸ್ಪೀಕರ್ ಯು.ಟಿ.ಖಾದರ್ ಸೂಚಿಸಿ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಿದರು.
ಇದಕ್ಕೂ ಮುನ್ನಾ ಎರಡನೇ ದಿನವೂ ಸದನ ಸಮಾವೇಶಗೊಳ್ಳುವ ಮುನ್ನ ಸರಕಾರ ಹಾಗೂ ಪ್ರತಿಪಕ್ಷಗಳ ನಾಯಕರ ನಡುವೆ ಸಂಧಾನದ ಸಭೆ ನಡೆಸಲಾಗಿತ್ತು. ನಿನ್ನೆ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಅವರು ಗ್ಯಾರಂಟಿ ಅನುಷ್ಠಾನ ಸಮಿತಿಗೆ ಸಂಬಂಧಿಸಿ ಕೇಳಿದ ಪ್ರಶ್ನೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ವಾಗ್ವಾದಕ್ಕೆ ಎಡೆಮಾಡಿಕೊಟ್ಟಿತ್ತು. ಅಲ್ಲದೆ ನಿನ್ನೆಯೂ ಕೂಡ ಸುಗಮ ಕಾರ್ಯಕಲಾಪಗಳು ನಡೆಯಲಿಲ್ಲ. ಆರೋಪ, ಪ್ರತ್ಯಾರೋಪ, ಧರಣಿಯಿಂದಾಗಿ ಕಲಾಪಕ್ಕೆ ಅಡ್ಡಿಯುಂಟಾಗಿತ್ತು.