ಕೌನ್ಸಲಿಂಗ್ ಮೂಲಕ ಅತಿಥಿ ಉಪನ್ಯಾಸಕರ ಆಯ್ಕೆ

ಬೆಂಗಳೂರು : ಕಾಲೇಜು ಶಿಕ್ಷಣ ಇಲಾಖೆಯ ಕಾಲೇಜುಗಳಿಗೆ ಸೇವಾ ಅನುಭವ ಹಾಗೂ ಯುಜಿಸಿ ನಿಗಧಿಪಡಿಸಿರುವ ವಿದ್ಯಾರ್ಹತೆ ಆಧಾರದ ಮೇಲೆ 2026-27ನೇ ಸಾಲಿಗೆ ಅತಿಥಿ ಉಪನ್ಯಾಸಕರನ್ನು ಆನ್ಲೈನ್ ಕೌನ್ಸಲಿಂಗ್ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಜು.11ರಿಂದ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು/ಎಡಿಟ್ ಮಾಡಲು ಪ್ರಾರಂಭವಾಗುತ್ತಿದ್ದು, ಜು.18 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಜು.19ರಂದು ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಿಸಲಾಗುತ್ತದೆ. ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಿಸಿದ ನಂತರ ಅರ್ಜಿಯನ್ನು ಎಡಿಟ್ ಮಾಡಲು ಜು.19ರಿಂದ ಜು.22ರ ವರೆಗೆ ಅವಕಾಶ ಕಲ್ಪಿಸಲಾಗಿದೆ.
ಜು.25ರಂದು ತಾತ್ಕಾಲಿಕ ಕಾರ್ಯಭಾರವನ್ನು ಪ್ರಕಟಿಸಲಾಗುತ್ತದೆ. ಜು.26ರಂದು ಕೌನ್ಸಲಿಂಗ್ ಮೆರಿಟ್ ಪಟ್ಟಿ ಹಾಗೂ ಕಾರ್ಯಭಾರವನ್ನು ಪ್ರಕಟಿಸಲಾಗುತ್ತಿದ್ದು, ಜು.28ರಂದು ಮೆರಿಟ್ ಪಟ್ಟಿಯನ್ವಯ ಕಾಲೇಜು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುತ್ತದೆ.
2025-26ನೇ ಸಾಲಿಗೆ ಈಗಾಗಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಆದರೆ ಈಗಾಗಲೇ ಅರ್ಜಿಯಲ್ಲಿರುವ ಮಾಹಿತಿಯನ್ನು ತಿದ್ದುಪಡಿ(ಎಡಿಟ್) ಅಥವಾ ಅಪ್‍ಡೇಟ್ ಮಾಡಲು ಇಚ್ಚಿಸಿದ್ದಲ್ಲಿ ಅಪ್ಲಿಕೇಷನ್ ಎಡಿಟ್ ಮೂಲಕ ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ.
ಕಾಲೇಜುಗಳ ಪ್ರಾಂಶುಪಾಲರು ಇಎಂಐಎಸ್ ಮೂಲಕ ಕಾರ್ಯಭಾರ ಅಪ್‍ಡೇಟ್ ಮಾಡಲು ಜು.20ರಿಂದ ಜು.23ರ ವರೆಗೆ ಅವಕಾಶ ನೀಡಲಾಗಿದೆ. ತಾತ್ಕಾಲಿಕ ಕಾರ್ಯಭಾರವನ್ನು ಜು.25ರಂದು ಪ್ರಕಟಿಸಲಾಗುತ್ತದೆ. ಜು.26 ಕಾಲೇಜುಗಳ ಪ್ರಾಂಶುಪಾಲರು ಇಎಂಐಎಸ್‍ನಲ್ಲಿ ಎಡಿಟ್ ಮಾಡಲು ಕೊನೆಯ ದಿನಾಂಕವಾಗಿದೆ.
ಪ್ರಥಮ ದರ್ಜೆ ಕಾಲೇಜುಗಳಿಗೆ https://emis.karnataka.gov.in/ application.aspx ಮತ್ತು ಸರಕಾರಿ ಚಿತ್ರಕಲಾ, ಸಂಸ್ಕೃತ ಕಾಲೇಜುಗಳಿಗೆ https://emis.karnataka.gov.in/AppSFC.aspx ಲಿಂಕ್‍ಗಳ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ https://dce.karnataka.gov.in ವೆಬ್‍ಸೈಟ್‍ಗೆ ಭೇಟಿ ನೀಡುವಂತೆ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.






