ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣ; ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್‌ಗೆ ನ್ಯಾಯಾಂಗ ಬಂಧನ

ಬೆಂಗಳೂರು : ಪಶು ವೈದ್ಯಾಧಿಕಾರಿ ನೇಮಕಾತಿ ವೇಳೆ ಕರ್ನಾಟಕ ಲೋಕಸೇವಾ ಆಯೋಗದಲ್ಲಿ(ಕೆಪಿಎಸ್‍ಸಿ) ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ಅಪರಾಧ ತನಿಖಾ ಇಲಾಖೆಯ(ಸಿಐಡಿ) ಪೊಲೀಸರು ರವಿವಾರ ಬಂಧಿಸಿದ್ದಾರೆ.
ಎರಡು ದಿನಗಳಿಂದ ಜ್ಞಾನೇಂದ್ರ ಅವರನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದರು. ಈಗ ಪಶು ವೈದ್ಯಾಧಿಕಾರಿ ನೇಮಕಾತಿ ಅಕ್ರಮದಲ್ಲಿ ಶಾಮೀಲಾಗಿರುವುದಕ್ಕೆ ಪೂರಕ ಸಾಕ್ಷ್ಯಾಧಾರ ಸಿಕ್ಕಿದ್ದು, ರವಿವಾರ ಮಧ್ಯಾಹ್ನ ಅವರನ್ನು ಬಂಧಿಸಿ ನ್ಯಾಯಾಧೀಶರ ಮನೆಗೆ ಹಾಜರು ಪಡಿಸಲಾಯಿತು. ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ್ದು, ಪೊಲೀಸರು ಜ್ಞಾನೇಂದ್ರ ಅವರನ್ನು ಪರಪ್ಪನ ಅಗ್ರಹಾರದ ಜೈಲಿಗೆ ಸ್ಥಳಾಂತರಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೆಪಿಎಸ್ಸಿ ನಡೆಸಿದ 400 ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಪಶುವೈದ್ಯಾಧಿಕಾರಿ ಆಕಾಂಕ್ಷಿ ಮಂಜುನಾಥ್ ಮತ್ತು ಪಶುಸಂಗೋಪನೆ ಇಲಾಖೆಯ ಅಧಿಕಾರಿಯೊಬ್ಬರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರುಗಳನ್ನು ನೀಡಿದ್ದರು. ಅದರನ್ವಯ ಕೆಪಿಎಸ್ಸಿಯ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸೇರಿದಂತೆ ಆಯೋಗದ ಸದಸ್ಯರು, ಅಧಿಕಾರಿಗಳ ವಿರುದ್ಧ ಎರಡು ಪ್ರತ್ಯೇಕ ಎಫ್‍ಐಆರ್ ದಾಖಲಾಗಿದ್ದವು.
ಈ ವೇಳೆ ಪಶು ವೈದ್ಯಾಧಿಕಾರಿ ಹುದ್ದೆ ಕೊಡಿಸಲು ಏಜೆಂಟರೊಬ್ಬರು 80 ಲಕ್ಷ ರೂ. ಬೇಡಿಕೆಯಿಟ್ಟು, ಮುಂಗಡವಾಗಿ 40 ಲಕ್ಷ ರೂ. ನೀಡುವಂತೆ ಕೇಳಿರುವ ಆಡಿಯೋ ಬಹಿರಂಗಗೊಂಡಿತ್ತು. ಅಲ್ಲದೆ ಜು.17ರಂದು ಪ್ರಕಟವಾದ ವೈದ್ಯಾಧಿಕಾರಿ ಹುದ್ದೆಯ ಅಂತಿಮ ಆಯ್ಕೆಪಟ್ಟಿಯಲ್ಲಿ ಕೆಪಿಎಸ್‍ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಹತ್ತಿರದ ಸಂಬಂಧಿಕರೇ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿ ಬಂದಿತ್ತು. ಪ್ರಕರಣದ ಗಂಭೀರತೆಯನ್ನು ಅರಿತ ರಾಜ್ಯ ಸರಕಾರವು ಎರಡು ಎಫ್‍ಐಆರ್‍ಗಳ ತನಿಖೆಯನ್ನು ಸಿಐಡಿಗೆ ವರ್ಗಾಸಿದೆ.
ನೇಮಕಾತಿಯಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ(ಈ.ಡಿ.) ಅಧಿಕಾರಿಗಳು ಕೆಪಿಎಸ್‍ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯರು, ಅಭ್ಯರ್ಥಿಗಳು ಸೇರಿ ಇತರರ ನಿವಾಸಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ಹೀಗಾಗಿ ನೇಮಕಾತಿ ಅಕ್ರಮಗಳನ್ನು ಈ.ಡಿ. ಮತ್ತು ಸಿಐಡಿ ಎರಡೂ ತನಿಖಾ ಸಂಸ್ಥೆಗಳು ಪರಿಶೀಲಿಸುತ್ತಿವೆ. ಪ್ರಕರಣದ ಹಣಕಾಸಿನ ಅಂಶಗಳನ್ನು ಈ.ಡಿ. ಪರಿಶೀಲಿಸುತ್ತಿದ್ದರೆ, ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮಗಳು ಮತ್ತು ವಿವಿಧ ಅಧಿಕಾರಿಗಳ ಪಾತ್ರದ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದೆ.
ಈ.ಡಿ. ಅಧಿಕಾರಿಗಳು ದಾಳಿ ನಡೆಸಿದ ಮರುದಿನವೇ ಐಎಎಸ್ ಅಧಿಕಾರಿ ಜ್ಞಾನೇಂದ್ರ ಅವರು ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆ ನಾಪತ್ತೆಯಾಗಿದ್ದರು. ಇದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ನಂತರ ತಂದೆಯ ಅನಾರೋಗ್ಯದ ಕಾರಣ ತುರ್ತು ರಜೆ ಪಡೆದು ಉತ್ತರ ಪ್ರದೇಶದ ತಮ್ಮ ಸ್ವಂತ ಊರಿಗೆ ತೆರಳಿದ್ದಾಗಿ ಸ್ವತಃ ಜ್ಞಾನೇಂದ್ರ ಅವರೇ ನಗರ ಪೊಲೀಸ್ ಆಯುಕ್ತರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.
ಈ ವೇಳೆ ಹಗರಣದಲ್ಲಿ ಭಾರಿ ಪ್ರಮಾಣದ ಹಣಕಾಸು ಅಕ್ರಮ ನಡೆದ ಆರೋಪದಡಿ ಈ.ಡಿ. ಅಧಿಕಾರಿಗಳು ಜ್ಞಾನೇಂದ್ರ ಅನುಪಸ್ಥಿತಿಯಲ್ಲಿ ನಗರದಲ್ಲಿರುವ ಅವರ ನಿವಾಸದ ಮೇಲೆ ದಾಳಿ ನಡೆಸಿ, ಪರಿಶೀಲಿಸಿದ್ದಾರೆ. ಅಲ್ಲದೆ ಸಿಐಡಿ ಅಧಿಕಾರಿಗಳು ತನಿಖೆಯ ವಿವರಗಳನ್ನು ಹಂಚಿಕೊಳ್ಳಲು ಈ.ಡಿ. ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಮಾಹಿತಿಯನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಒಎಂಆರ್ ಶೀಟ್‍ಗಳ ತಿದ್ದುಪಡಿ ಬಗ್ಗೆಯೂ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಕೆಪಿಎಸ್‍ಸಿ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದರು. ಅಲ್ಲದೆ ಎಲ್ಲ 329 ಅಭ್ಯರ್ಥಿಗಳ ವಿಚಾರಣೆಯನ್ನೂ ನಡೆಸಿ, ಅಭ್ಯರ್ಥಿಗಳಿಂದ ವಶಪಡಿಸಿಕೊಂಡಿರುವ ಓಎಂಆರ್ ಕಾರ್ಬನ್ ಶೀಟ್‍ಗಳನ್ನು ಈಗಾಗಲೇ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದರು. ಈ ನಡುವೆ ಸಿಐಡಿ ಅಧಿಕಾರಿಗಳು ಜ್ಞಾನೇಂದ್ರ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಜ್ಞಾನೇಂದ್ರ ನಗರಕ್ಕೆ ಬರುತ್ತಿದ್ದಂತೆ, ಅವರನ್ನು ವಶಕ್ಕೆ ಪಡೆದು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.






