ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ ಗುಂಪು ರಚನೆ ಅಗತ್ಯ : ಎಚ್.ಆಂಜನೇಯ

ಎಚ್.ಆಂಜನೇಯ
ಬೆಂಗಳೂರು : ಅಲೆಮಾರಿ ಸಮುದಾಯ ಅಸ್ಪೃಶ್ಯತೆ ನೋವಿನ ಜೊತೆಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿದ್ದು, ಅವರನ್ನು ಮುಖ್ಯವಾಹಿನಿಗೆ ತರಲು ಒಳಮೀಸಲಾತಿಯಲ್ಲಿ ಈ ವರ್ಗಕ್ಕೆ ಪ್ರತ್ಯೇಕ ಮೀಸಲಾತಿ ಗುಂಪು ರಚಿಸಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಆಗ್ರಹಿಸಿದ್ದಾರೆ.
ಶನಿವಾರ ಕರ್ನಾಟಕ ಪರಿಶಿಷ್ಟ ಜಾತಿ ಅಲೆಮಾರಿ ಅಭಿವೃದ್ಧಿ ವೇದಿಕೆ ವತಿಯಿಂದ ಗಾಂಧಿಭವನದಲ್ಲಿ ಆಯೋಜಿಸಿದ್ದ ‘ಅಲೆಮಾರಿ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯಲ್ಲಿರುವ 49ಕ್ಕೂ ಹೆಚ್ಚು ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಜಾತಿಯಲ್ಲಿ ಗುರುತಿಸಿಕೊಂಡಿರುವ ಅಲೆಮಾರಿಗಳ ಬದುಕು ನಾಗರಿಕ ಪ್ರಪಂಚನವನ್ನೇ ಅಣಕಿಸುವ ರೀತಿ ಇದೆ ಎಂದರು.
ಸುಡಗಾಡುಸಿದ್ದ, ದಕ್ಕಲಿಗ, ಬುಡ್ಗಜಂಗಮ, ದೊಂಬರು, ಹಂದಿಜೋಗಿ, ಸಿಂದೋಳು ಸೇರಿ ಅನೇಕ ಜಾತಿಗಳು ಅಲೆದಾಟದಲ್ಲಿಯೇ ಬದುಕು ನಡೆಸುತ್ತಿವೆ. ಈ ಸಮುದಾಯಕ್ಕೆ ನೆಲೆ ಒದಗಿಸುವ ಬಹುದೊಡ್ಡ ಜವಾಬ್ದಾರಿ ನಾಗರಿಕ ಸಮಾಜದ ಮೇಲಿದೆ ಎಂದರು.
ಅಲೆಮಾರಿ ಸಮುದಾಯಗಳ ಹಕ್ಕುಗಳಿಗಾಗಿ ರಾಜ್ಯಮಟ್ಟದ ಸಮಾವೇಶ ಆಯೋಜಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿ, ಪ್ರಮುಖ ಬೇಡಿಕೆಗಳನ್ನು ಅವರ ಗಮನಕ್ಕೆ ತರುವ ಪ್ರಯತ್ನ ಮಾಡಬೇಕಾಗಿದೆ ಎಂದು ಹೇಳಿದರು.
ಸದಾಶಿವ, ಮಾಧುಸ್ವಾಮಿ ಸೇರಿ ಎಲ್ಲ ಆಯೋಗಗಳು ಅಲೆಮಾರಿ ಸಮುದಾಯವನ್ನು ಗುರುತಿಸಿ, ಅವರಿಗೆ ಮೀಸಲಾತಿ ಸೌಲಭ್ಯ ತಲುಪಿಸಲು ಪ್ರತ್ಯೇಕ ಗುಂಪು ಅಗತ್ಯವೆಂದು ಅಭಿಪ್ರಾಯಪಟ್ಟಿವೆ. ಆದ್ದರಿಂದ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಆಯೋಗವು ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿ, ಧ್ವನಿಯಿಲ್ಲದ ಈ ಸಮುದಾಯಗಳಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ ಈಗ ಒಳಮೀಸಲಾತಿ ಜಾರಿಗೆ ದಿನಗಣನೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಜಾತಿಗಣತಿ ಸಮೀಕ್ಷೆ ಕೂಡ ನಡೆದಿದೆ. ಆದ್ದರಿಂದ ಸರಕಾರಕ್ಕೆ ವರದಿ ಸಲ್ಲಿಸುವ ಸಂದರ್ಭ ಒಳಮೀಸಲಾತಿಯಲ್ಲಿ ಈ ಸಮುದಾಯಗಳಿಗಾಗಿ ಪ್ರತ್ಯೇಕ ಗುಂಪು ರಚಿಸಬೇಕು. ಇಲ್ಲದಿದ್ದರೆ ಪರಿಶಿಷ್ಟ ಜಾತಿಯಲ್ಲಿನ ಬಲಾಢ್ಯರ ಮಧ್ಯೆ ಅಲೆಮಾರಿ ಸಮುದಾಯ ಕಳೆದುಹೋಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಾಹಿತಿ ವಡ್ಡಗೆರೆ ನಾಗರಾಜಯ್ಯ ಮಾತನಾಡಿ, ಅಲೆಮಾರಿ ಸಮುದಾಯಗಳ ಕುರಿತು ಎಲ್ಲ ವರ್ಗದ ಜನರು ಕರುಣೆ ಜೊತೆಗೆ ಅಗತ್ಯ ಸೌಲಭ್ಯ ಕಲ್ಪಿಸಲು ಹೋರಾಟ ನಡೆಸಬೇಕಾಗಿದೆ. ಆದ್ದರಿಂದ ಮೊದಲು ಎಲ್ಲ ಅಲೆಮಾರಿ ಸಮುದಾಯಗಳು ಒಗ್ಗೂಡಬೇಕು ತಿಳಿಸಿದರು.
ಈ ಸಂದರ್ಭದಲ್ಲಿ ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಸುಡಗಾಡು ಸಿದ್ದ ಸಮಾಜದ ರಾಜ್ಯಾಧ್ಯಕ್ಷ ಲೋಹಿತ್, ಗೋಸಂಗಿ ಸಮಾಜದ ಮುಖಂಡ ಚವಡೆ ಲೋಕೇಶ್, ಸಿಂದೋಳ ಸಮಾಜದ ಹನುಮಂತ, ಮುಖಂಡರಾದ ಶಾಂತಕುಮಾರ್, ವೀರೇಶ್, ವೈ.ಶಿವಕುಮಾರ್, ರಾಘವೇಂದ್ರ ಮತ್ತಿತರರು ಹಾಜರಿದ್ದರು.
ವೇದಿಕೆಯಲ್ಲಿ ಗೊಂದಲ: ‘ಕೊರಚ, ಕೊರಮ ಸಮುದಾಯದ ಕೆಲವರು ಸಭೆಗೆ ದಿಢೀರ್ ಆಗಮಿಸಿ ‘ನಮ್ಮನ್ನು ಯಾಕೆ ಆಹ್ವಾನಿಸಿಲ್ಲ’ ಎಂದು ಸಂಘಟಕರನ್ನು ಪ್ರಶ್ನಿಸಿದರು. ‘ನಾವು ಅಲೆಮಾರಿಗಳು. ಆದರೆ, ನಮ್ಮನ್ನು ಹೊರಗಿಟ್ಟು ಸಭೆ ಆಯೋಜಿಸಿರುವುದು ತಪ್ಪು’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕೆಲಕಾಲ ಗೊಂದಲ ಉಂಟಾಯಿತು. ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ, ಅಲೆಮಾರಿ ಮುಖಂಡ ಆದರ್ಶ ಯಲ್ಲಪ್ಪ ಧ್ವನಿಗೂಡಿಸಿದರು. ತಕ್ಷಣ ಮಧ್ಯಪ್ರವೇಶಿಸಿದ ಮಾಜಿ ಸಚಿವ ಎಚ್.ಆಂಜನೇಯ, ‘ಈ ಸಭೆ ಅಶಕ್ತರಿಗೆ ಧ್ವನಿ ಕೊಡಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದೆ. ಇಲ್ಲಿ ಗೊಂದಲ ಬೇಡ, ಎಲ್ಲರೂ ಒಟ್ಟಾಗಿ ಕುಳಿತು ಚರ್ಚಿಸೋಣ’ ಎಂದು ಸಮಾಧಾನ ಪಡಿಸಿದರು.