ಹನೂರು ಶೂಟೌಟ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಾರ್ಗಸೂಚಿ ಉಲ್ಲಂಘನೆ : ಎಸ್.ಬಾಲನ್
ಮೃತರ ಕುಟುಂಬ ಸದಸ್ಯರ ಜೊತೆ ಸಂವಾದ, ನ್ಯಾಯ ಆಗ್ರಹ ಸಭೆ

ಮೃತರು
ಬೆಂಗಳೂರು : ಹನೂರು ಶೂಟೌಟ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಹಿರಿಯ ವಕೀಲ ಎಸ್.ಬಾಲನ್ ತಿಳಿಸಿದ್ದಾರೆ.
ಶುಕ್ರವಾರ ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಅಖಿಲ ಭಾರತ ವಕೀಲರ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಹನೂರು ಶೂಟೌಟ್ನಲ್ಲಿ ಮೃತರಾದ ಕುಟುಂಬ ಸದಸ್ಯರ ಜೊತೆ ಸಂವಾದ- ನ್ಯಾಯ ಆಗ್ರಹ ಸಭೆಯಲ್ಲಿ ಅವರು ಮಾತನಾಡಿದರು.
ಅಂತೋಣಿಸ್ವಾಮಿ, ಜಾನ್ ರೋಸ್ ಪೀಟರ್, ಸೆಬಾಸ್ಟಿಯನ್ ಡೇವಿಡ್ ಕುಮಾರ್ರನ್ನು ನಿದ್ದೆ ಮಾಡುವಾಗ ತುಂಬಾ ಹತ್ತಿರದಿಂದ ಅರಣ್ಯ ಸಿಬ್ಬಂದಿ ಶೂಟ್ ಮಾಡಿದ್ದಾರೆ. ಆಗ ಶೂಟ್ ಮಾಡುವವರ ಯೋಚನೆ ಏನಾಗಿರಬಹುದು. ಬೆಳಗ್ಗೆ 5 ಗಂಟೆಗೆ ಘಟನೆ ನಡೆದಿದೆ. ಆದರೆ ಸಂಜೆಯ ವರೆಗೂ ಎಫ್ಐಆರ್ ದಾಖಲಾಗಿಲ್ಲ. ಇದರಿಂದಲೇ ಕಾನೂನು ರಕ್ಷಿಸಬೇಕಾದವರೇ ಕಾನೂನು ಉಲ್ಲಂಘಿಸಿರುವುದು ಗೊತ್ತಾಗುತ್ತದೆ ಎಂದು ತಿಳಿಸಿದರು.
ಹನೂರು ಶೌಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರು ಉತ್ತರಿಸಬೇಕು. ಇಲ್ಲವಾದರೆ ಈ ಸರಕಾರ ಅಧಿಕಾರದಿಂದ ಕೆಳಗಿಳಿಯಬೇಕು. ನ್ಯಾಯಕ್ಕಾಗಿ ಆಗ್ರಹಿಸಿ ಅವರ ಅಧಿಕೃತ ನಿವಾಸದ ಮುಂದೆ ನಾವು ಧರಣಿ ಹಮ್ಮಿಕೊಳ್ಳಬೇಕು. ಈಗ ತನಿಖೆ ನಡೆಯುತ್ತಿದೆ. ತನಿಖೆ ಸರಿಯಾದ ದಿಕ್ಕಿನಲ್ಲೇ ಸಾಗುತ್ತಿದೆ ಎಂದು ನಾನು ಭಾವಿಸುತ್ತೇನೆ. ಆದರೆ ಶೂಟ್ ಮಾಡಿದವರಿಗೆ ಜಾಮೀನು ಏಕೆ ನೀಡಲಾಯಿತು ಎಂಬ ಪ್ರಶ್ನೆ ಕಾಡುತ್ತಿದೆ ಎಂದು ತಿಳಿಸಿದರು.
ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ಮಾತನಾಡಿದರು.
ಸಭೆಯಲ್ಲಿ ಸಂತ್ರಸ್ತ ಕುಟುಂಬದ ಲೂರ್ದು ಮೇರಿ, ಪೆರಿಯನಾಯಗಮ್ಮಾಳ್, ಎನ್ಕೌಂಟರ್ನಲ್ಲಿ ಬದುಕುಳಿದ ಮಹಿಮಾ ದಾಸ್, ಅಖಿಲ ಭಾರತ ವಕೀಲರ ಒಕ್ಕೂಟದ ಮುಖಂಡ ಆನಂದ್ ವಿ., ಕೆಪಿಆರ್ಎಸ್ ರಾಜ್ಯ ಸಹ ಕಾರ್ಯದರ್ಶಿ ಎನ್.ಎಲ್.ಭರತ್ ರಾಜ್, ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ ಟಿ., ಕರ್ನಾಟಕ ರಾಜ್ಯ ರೈತ ಸಂಘದ ಚುಕ್ಕಿ ನಂಜುಂಡಸ್ವಾಮಿ, ಸಿಐಟಿಯು ಪ್ರದಾನ ಕಾರ್ಯದರ್ಶಿ ಎಸ್.ವರಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.
ಪ್ರಮುಖ ಆಗ್ರಹಗಳು :
ಹೈಕೋರ್ಟ್ ನ್ಯಾಯಾದೀಶರ ನೇತೃತ್ವದಲ್ಲಿ ಸಮಗ್ರ ನ್ಯಾಯಾಂಗ ತನಿಖೆ ನಡೆಸಬೇಕು. ಸಂತ್ರಸ್ಥ ಕುಟುಂಬಗಳಿಗೆ ತಲಾ ಒಂದು ಕೋಟಿ ರೂ. ಪರಿಹಾರ ನೀಡಬೇಕು. ಕೊಲೆ ಆರೋಪಿಗಳನ್ನು ಬಂಧಿಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕು. ಸಂತ್ರಸ್ತ ಕುಟುಂಬದ ಒಬ್ಬರಿಗೆ ಸರಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಲಾಯಿತು.
ಮೃತಪಟ್ಟ ಎಲ್ಲರ ಮಕ್ಕಳೂ ಚಿಕ್ಕವರೇ ಇದ್ದಾರೆ. ಏನಾದರೂ ಮಾಡಿ ನಮಗೆ ನ್ಯಾಯ ಒದಗಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು.
-ಡೋಮಿನೋ ಲಿಯೋ ಮೇರಿ, ಸೆಬಾಸ್ಟಿಯನ್ ಡೇವಿಡ್ ಕುಮಾರ್ ಪತ್ನಿ






