ಮುಂದಿನ ವಿಧಾನಸಭೆ, ಲೋಕಸಭೆಗೆ ಮಹಿಳಾ ಮೀಸಲಾತಿ ಜಾರಿ : ಎಚ್.ಡಿ.ದೇವೇಗೌಡ

ಬೆಂಗಳೂರು : ಮುಂದಿನ ವಿಧಾನಸಭೆ, ಲೋಕಸಭೆಗೆ ಬಹುಶಃ ಮಹಿಳಾ ಮೀಸಲಾತಿ ಜಾರಿಯಾಗಬಹುದು. ಅದರಂತೆ ರಾಜ್ಯದಲ್ಲಿ 75 ರಿಂದ 80 ಮಹಿಳೆಯರು ವಿಧಾನಸಭೆ ಸ್ಪರ್ಧಿಗಳಾಗುತ್ತಾರೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ರವಿವಾರ ನಗರದ ಡಾ.ಬಾಬು ಜಗಜೀವನ ರಾಮ್ ಭವನದಲ್ಲಿ ಜೆಡಿಎಸ್ ಮಹಿಳಾ ಘಟಕ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿಬಿಎ ಚುನಾವಣೆ ಸಂಬಂಧ ಮೀಸಲಾತಿ ಪಟ್ಟಿ ಅಂತಿಮವಾಗಿ ಪ್ರಕಟವಾಗಿದೆ. ಮುಂಬರುವ ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಹೆಚ್ಚು ಮಹಿಳೆಯರು ಸ್ಪರ್ಧೆ ಮಾಡಬೇಕು ಎಂದು ಕರೆ ನೀಡಿದರು.
ಜಿಬಿಎನಲ್ಲಿ 369 ವಾರ್ಡುಗಳಲ್ಲಿ ಜೆಡಿಎಸ್‍ಗೆ ಎಷ್ಟು ವಾರ್ಡ್‍ಗಳಲ್ಲಿ ಸ್ಪರ್ಧಿಸುವ ಶಕ್ತಿ ಇದೆ ಎಂಬುದನ್ನು ಗಮನಿಸಿ. ಬಳಿಕ ಮಹಿಯರಿಗೆ ಎಷ್ಟು ಜನರಿಗೆ ಅವಕಾಶ ನೀಡಬಹುದು ಎಂದು ತೀರ್ಮಾನ ಮಾಡಿ. ಅದಷ್ಟು ಹೆಚ್ಚು ಪ್ರಮಾಣದಲ್ಲಿ ಮಹಿಳೆಯರು ಸ್ಪರ್ಧೆ ಮಾಡಬೇಕು. ಆಗ ಮಾತ್ರ ಮಹಿಳಾ ಮೀಸಲುಗೆ ಅರ್ಥ ಬರುತ್ತದೆ ಎಂದು ಅವರು ಉಲ್ಲೇಖಿಸಿದರು.
ಸರಕಾರದ ಎಲ್ಲ ಇಲಾಖೆಗಳಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ಕೊಟ್ಟಿದ್ದು ನಾವು. ಶೇ.33ರಷ್ಟು ಮಹಿಳಾ ಮೀಸಲಾತಿ ಕೊಡಲು ತೀರ್ಮಾನ ಮಾಡಿದ್ದು ನಾವು. ಇವತ್ತು ಅದೆಲ್ಲವೂ ಜಾರಿಗೆ ಬರುತ್ತಿದೆ. ಈ ಬಗ್ಗೆ ನನಗೆ ಆತ್ಮತೃಪ್ತಿ ಇದೆ. ನಮ್ಮ ಮುಖಂಡರು, ಕಾರ್ಯಕರ್ತರು ಜನರಿಗೆ ಈ ವಿಷಯ ಹೇಳಬೇಕು ಎಂದು ಅವರು ಹೇಳಿದರು.







