ಬಿಡದಿ ಸಹಿತ ಬೆಂಗಳೂರು ಸುತ್ತಮುತ್ತ ಬಡವರ ಭೂಮಿ ಕಸಿಯುವ ಹುನ್ನಾರ : ಇಂದಿನಿಂದಲೇ ನನ್ನ ಹೋರಾಟ ಆರಂಭ : ಎಚ್.ಡಿ.ದೇವೇಗೌಡ

ಬೆಂಗಳೂರು : ಬಿಡದಿ ಸೇರಿದಂತೆ ಬೆಂಗಳೂರು ಸುತ್ತಮುತ್ತ ಬಡವರ ಭೂಮಿ ಕಸಿದುಕೊಳ್ಳುವ ಶಕ್ತಿಗಳನ್ನು ಮಟ್ಟ ಹಾಕಬೇಕಾಗಿದ್ದು, ಈ ನಿಟ್ಟಿನಲ್ಲಿ ಇಂದಿನಿಂದಲೇ ನನ್ನ ಹೋರಾಟ ಆರಂಭವಾಗಿದೆ ಎಂದು ಜೆಡಿಎಸ್ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಶನಿವಾರ ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಸಾಮಾಜಿಕ ನ್ಯಾಯದ ಮಾತಿನ ಬಗ್ಗೆ ನನಗೂ ಅರಿವಿದೆ. ಆದರೆ, ಬೆಂಗಳೂರು ಸುತ್ತಮುತ್ತ ಸುಮಾರು 20,000 ಎಕರೆ ಭೂಮಿ ಯಾರ ಹೆಸರಿನಲ್ಲಿ ಇದೆ ಎಂಬುದನ್ನು ತನಿಖೆ ಮಾಡಿ ಎಂದು ಈಗಾಗಲೇ ಪತ್ರ ಬರೆದಿದ್ದೇನೆ. ಸಿದ್ದರಾಮಯ್ಯನವರೇ ಬೆಂಗಳೂರು ನಗರದ ಹೊಣೆ ಹೊತ್ತಿರುವವರ ಒತ್ತಡಕ್ಕೆ ಮಣಿದು ಜನರ ಸಮಸ್ಯೆಯನ್ನು ನೀವು ಕೇಳುತ್ತಿಲ್ಲ. ಬಿಡದಿ ರೈತರ ಸಮಸ್ಯೆಯನ್ನು ಯಾರಾದರೂ ಹೋಗಿ ಕೇಳಿದ್ದೀರಾ ಎಂದು ಪ್ರಶ್ನಿಸಿದರು.
ಬಿಡದಿ ಟೌನ್ ಶಿಪ್ ಹೆಸರಿನಲ್ಲಿ ಫಲವತ್ತಾದ ಭೂಮಿಯನ್ನು ಹೊಡೆಯಲು ಹೊರಟಿದ್ದಾರೆ. ಭೂಮಿಯನ್ನು ಕಿತ್ತುಕೊಂಡು ಯಾರಿಗೆ ಕೊಡಲು ಹೊರಟಿದ್ದಾರೆ ಎಂಬುದನ್ನು ಸರಕಾರ ಹೇಳಬೇಕು. ಭಾಗದಲ್ಲಿ ರೈತರು ದೊಡ್ಡ ಮಟ್ಟದ ಹೈನುಗಾರಿಕೆ, ತೋಟಗಾರಿಕೆ ಮಾಡುತ್ತಿದ್ದಾರೆ. ದೊಡ್ಡ ಪ್ರಮಾಣದಲ್ಲಿ ರೈತರು ನಿತ್ಯವೂ ಡೇರಿಗೆ ಹಾಲನ್ನು ನೀಡುತ್ತಿದ್ದಾರೆ. ಹಿಂದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 250 ಕೋಟಿ ವೆಚ್ಚದಲ್ಲಿ ನೀರಾವರಿ ಯೋಜನೆ ಮಾಡಿ ಈ ಭಾಗಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇಂತಹ ನೀರಾವರಿ ಜಾಗವನ್ನು ಕಿತ್ತುಕೊಳ್ಳಲು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರು ಹೊರಟಿದ್ದಾರೆ ಎಂದು ಆರೋಪಿಸಿದರು.
ಬಿಡದಿಯ ರೈತರ ಪರಿಸ್ಥಿತಿಯನ್ನು ಒಮ್ಮೆ ನೀವೇ ಖುದ್ದಾಗಿ ನೋಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ ಅವರು, ನಾನು ಬರುತ್ತೇನೆ, ನೀವು ಬನ್ನಿ. ಸ್ಥಳಕ್ಕೆ ಭೇಟಿ ನೀಡೋಣ. ಈವರೆಗೂ ಸ್ಥಳೀಯ ಶಾಸಕರು ತಹಶೀಲ್ದಾರರು ಜಿಲ್ಲಾಧಿಕಾರಿಗಳು ಆ ಜನರ ಸಮಸ್ಯೆಯನ್ನು ಕೇಳಿಲ್ಲ. ಇಲ್ಲಿ ದಂಧೆ ನಡೆಯುತ್ತಿದೆ. ರೈತರ ಭೂಮಿಯನ್ನು ಕಿತ್ತುಕೊಂಡು ದಂಧೆ ಮಾಡುತ್ತಿದ್ದಾರೆ. ಕನಕಪುರದಲ್ಲಿ ಎಷ್ಟು ಜಮೀನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂಬ ಬಗ್ಗೆ ನನ್ನ ಬಳಿ ಮಾಹಿತಿ ಇದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ ಸೇರಿದಂತೆ ಪ್ರಮುಖರಿದ್ದರು.






