ಬಿಡದಿ ಟೌನ್ ಶಿಪ್ ಯೋಜನೆ ಕೈ ಬಿಡದಿದ್ದರೆ ಗಾಂಧೀಜಿ ಪ್ರತಿಮೆ ಮುಂದೆ ಧರಣಿ : ಎಚ್.ಡಿ.ದೇವೇಗೌಡ

ಬೆಂಗಳೂರು : ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯನವರನ್ನು ಇಳಿಸಿ ತಮ್ಮನ್ನು ಮುಖ್ಯಮಂತ್ರಿ ಮಾಡುವುದಕ್ಕಾಗಿ ಹೈಕಮಾಂಡ್'ಗೆ ಒಡ್ಡಿರುವ ಆಮಿಷಗಳನ್ನು ಈಡೇರಿಸಲು ಸಿಎಂ ಡಿ.ಕೆ. ಶಿವಕುಮಾರ್ ಅವರು ಬಿಡದಿ ಟೌನ್ ಶಿಪ್ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡ ಅವರು ಗಂಭೀರ ಆರೋಪ ಮಾಡಿದರು.
ಈ ಟೌನ್ಶಿಪ್'ಗೆ ಭೂಮಿ ಕೊಡಲು ರೈತರು ಸ್ಪಷ್ಟವಾಗಿ ನಿರಾಕರಿಸುತ್ತಿದ್ದಾರೆ. ಬಡರೈತರ ಹೊಟ್ಟೆಯ ಮೇಲೆ ಹೊಡೆಯಬೇಡಿ. ಹೈಕಮಾಂಡ್ ಗೆ ಒಡ್ಡಿರುವ ಆಮಿಷಗಳನ್ನು ಈಡೇರಿಸಲು ಬೇರೆ ಬೇರೆ ದಾರಿಗಳಿವೆ. ದಯಮಾಡಿ ಈ ಯೋಜನೆಯನ್ನು ಇಲ್ಲಿಗೇ ಕೈಬಿಡಿ. ಒಂದು ವೇಳೆ ಯೋಜನೆಯನ್ನು ನೀವು ಕೈ ಬಿಡದಿದ್ದರೆ ವಿಧಾನಸೌಧದ ಪಕ್ಕದಲ್ಲಿರುವ ಮಹಾತ್ಮ ಗಾಂಧಿ ಅವರ ಪ್ರತಿಮೆಯ ಮುಂದೆ ಧರಣಿ ಕೂರುತ್ತೇನೆ. ಅಂತಹ ಪರಿಸ್ಥಿತಿಗೆ ನನ್ನನ್ನು ದೂಡಬೇಡಿ ಎಂದರು.
ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು; ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಯಾವ ಅಧಿಕಾರಿ ಕೂಡ ಸರ್ವೆ ಮಾಡುತ್ತೇವೆ ಎಂದು ಬಿಡದಿಗೆ ಹೋಗಲಿಲ್ಲ. ಹೊಸ ಮುಖ್ಯಮಂತ್ರಿ ಬಂದು ಒಂದು ತಿಂಗಳು ಕೂಡ ಆಗಲಿಲ್ಲ, ಆಗಲೇ ಅಧಿಕಾರಿಗಳನ್ನು ಬಿಟ್ಟು ಸರ್ವೆ ಮಾಡಿಸಿ ಭೂಮಿಯನ್ನು ಕಿತ್ತುಕೊಳ್ಳಲು ಹೊರಟಿದ್ದಾರೆ. ಯಾವ ಕಾರಣದಿಂದ ನೀವು ಈ ಯೋಜನೆಗೆ ಕೈ ಹಾಕಿದ್ದೀರ ಎಂಬುದು ನನಗೆ ಗೊತ್ತಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರನ್ನು ಇಳಿಸಲು ದೊಡ್ಡ ಪ್ಲಾನ್ ಮಾಡಿದರು. ಅದಕ್ಕಾಗಿ ಹೈಕಮಾಂಡ್ ಅನ್ನು ಒಲಿಸಿಕೊಳ್ಳಲು ನಾನಾ ಆಮಿಷಗಳನ್ನು ಒಡ್ಡಲಾಯಿತು. ಆ ಆಮಿಷಗಳನ್ನು ಪೂರೈಸಲು ಬಡರೈತರ ಭೂಮಿಗೆ ಕೈ ಹಾಕಿದ್ದೀರಿ. ಚುನಾವಣಾ ಫಂಡ್ ಬಗ್ಗೆ ಕೂಡ ಹೈಕಮಾಂಡ್'ಗೆ ಡಿ.ಕೆ. ಶಿವಕುಮಾರ್ ಆಶ್ವಾಸನೆ ಕೊಟ್ಟಿದ್ದಾರೆ. ಇದೆಲ್ಲವನ್ನು ಸರಿದೂಗಿಸಿಕೊಳ್ಳಲು ಬಿಡದಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದರು.
ನನ್ನ ಪತ್ರಕ್ಕೆ ಸಿಎಂ ಕಚೇರಿ ಹಿಂಬರಹವನ್ನೇ ನೀಡಿಲ್ಲ:
ಈ ರಾಜ್ಯದ ಮುಖ್ಯಮಂತ್ರಿಗಳಿಗೆ ನಾನು ಕಳೆದ ಜೂನ್ 25ರಂದು ಪತ್ರ ಬರೆದಿದ್ದೇನೆ. ಇವತ್ತು ಜುಲೈ 14. ಹೆಚ್ಚು ಕಮ್ಮಿ 20 ದಿನ ಆಗಿದೆ. ಅವರಿಗೆ ಪತ್ರ ತಲುಪಿರುತ್ತದೆ ಎಂದು ಭಾವಿಸಿದ್ದೇನೆ. ಆದರೂ ಅವರಿಗೆ ತಲುಪಿದೆಯೋ ಇಲ್ಲವೋ ಎಂಬ ಬಗ್ಗೆ ನನಗೆ ಈವರೆಗೆ ಹಿಂಬರಹವನ್ನು ಕೊಟ್ಟಿಲ್ಲ. ನಾನು ಒಬ್ಬ ರೈತರ ಮಗ. ಈಗ ನನಗೆ ಯಾವ ಅಧಿಕಾರ ಇಲ್ಲ. ರೈತನ ಮಗನಾಗಿ ನಾನು ಪತ್ರ ಬರೆದಿದ್ದೇನೆ. ಅದಕ್ಕೆ ಒಂದು ಹಿಂಬರಹ ಕೊಡುವ ಸೌಜನ್ಯ ಮುಖ್ಯಮಂತ್ರಿಗಳ ಕಚೇರಿಗೆ ಇಲ್ಲದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಸಂಸದ ಕುಪೇಂದ್ರ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಮಾಜಿ ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ, ಎ.ಮಂಜುನಾಥ್ ಹಾಗೂ ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಅನೇಕ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.






