ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡುವುದನ್ನು ಬಿಟ್ಟು ಮನೆಗಳ ಮುಂದೆ ಕಸ ಸುರಿಯುವುದು ಸರಿಯಲ್ಲ : ಎಚ್ಡಿಕೆ

ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ನ. 1: ‘ನಗರದಲ್ಲಿ ರಸ್ತೆ ಗುಂಡಿ ಮುಚ್ಚಲು ವಿಧಿಸಿರುವ ಗಡುವು ಮುಗಿದಿದ್ದರೂ ಇನ್ನು ಗುಂಡಿಗಳು ಹಾಗೆಯೇ ಇವೆ. ಆ ಬಗ್ಗೆ ಪ್ರಶ್ನಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಕೇಳಿ ಎಂದಿರುವುದು ಬೇಜವಾಬ್ದಾರಿಯ ಪರಮಾವಧಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಾ? ಅಥವಾ ಡಿ.ಕೆ.ಶಿವಕುಮಾರ್ ಅವರೋ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಸಿಎಂ ಸಭೆ ಮಾಡಿ ಗುಂಡಿ ಮುಚ್ಚಲು ಗಡುವು ನೀಡಿದ್ದರು. ಆದರೆ ರಸ್ತೆಗಳಲ್ಲಿ ಗುಂಡಿಗಳು ಹಾಗೆಯೇ ಇವೆ. ಸಿಎಂ ಮಾತಿಗೆ ಅಧಿಕಾರಿಗಳು ಎಷ್ಟು ಬೆಲೆ ಕೊಡುತ್ತಿದ್ದಾರೆ ಎನ್ನುವುದು ಇದರಿಂದ ಗೊತ್ತಾಗುತ್ತದೆ ಎಂದರು.
ಸಿದ್ದರಾಮಯ್ಯರ ಹೇಳಿಕೆ ನೋಡಿದಾಗ ಅವರು ಈ ರಾಜ್ಯದ ಸಿಎಂ ಆಗಿ ಕಾರ್ಯನಿರ್ವಹಣೆ ಮಾಡುವುದಕ್ಕೆ ಅಸಮರ್ಥ ಆಗಿದ್ದೇನೆಂದು ಹೇಳಿದ ರೀತಿ ಇದೆ. ಅವರು ಇಂತಹ ಹೇಳಿಕೆ ನೀಡಬಾರದು ಎಂದ ಅವರು, ನ.21ಕ್ಕೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುತ್ತಾರೆಂಬ ಚರ್ಚೆ ಅವರ ಪಕ್ಷದಲ್ಲಿನ ತೀರ್ಮಾನ. ಈ ವಿಷಯದಲ್ಲಿ ನಾನು ಮಾತನಾಡುವುದು ಸಣ್ಣತನ ಆಗುತ್ತದೆ ಎಂದರು.
ಸರಕಾರದ ಅವಧಿ ಇನ್ನು ಎರಡೂವರೆ ವರ್ಷ ಇದೆ. ಆದರೆ, ಸರಕಾರ ನಡೆಸುವಲ್ಲಿ ಕಾಂಗ್ರೆಸ್ನವರೇ ಪ್ರತಿನಿತ್ಯ ನಗೆಪಾಟಲಿಗೆ ಒಳಗಾಗುತ್ತಿದ್ದಾರೆ. ವಿಪಕ್ಷಗಳು ಮಾತಾಡುವ ಅವಶ್ಯಕತೆಯೇ ಇಲ್ಲ. ಜವಾಬ್ದಾರಿ ಸ್ಥಾನದಲ್ಲಿ ಇರುವ ಸಚಿವರುಗಳೇ ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಭಿನ್ನಮತದ ಬಗ್ಗೆ ಎನ್ಡಿಎ ಮೈತ್ರಿಕೂಟಕ್ಕೆ ಆಸಕ್ತಿ ಇಲ್ಲ ಎಂದರು.
ಮನೆಗಳ ಮುಂದೆ ಕಸ ಸುರಿಯುವುದು ಸರಿಯಲ್ಲ :
ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡುವುದನ್ನು ಬಿಟ್ಟು ಮನೆಗಳ ಮುಂದೆ ಕಸ ಸುರಿಯುವುದು ಸರಿಯಲ್ಲ. ಕಸ ವಿಲೇವಾರಿಗೆ ಸೂಕ್ತ ಜಾಗ ಇಲ್ಲ. ಹೀಗಾಗಿ ಮನೆಗಳ ಮುಂದೆ ತಂದು ಹಾಕಿದರೆ ಜನರೇ ಕಸ ವಿಲೇ ಮಾಡಿಕೊಳ್ಳುತ್ತಾರೆ ಎನ್ನುವ ಭಾವನೆ ಇರಬಹುದು. ಆ ಉದ್ದೇಶದಿಂದ ಸರಕಾರ ಮನೆಗಳ ಮುಂದೆ ಕಸ ಸುರಿಯುವ ವಿನೂತನ ಕಾರ್ಯಕ್ರಮ ಮಾಡಿದೆ ಎಂದು ಟೀಕಿಸಿದರು.
ಮಧ್ಯಂತರ ಚುನಾವಣೆಗೆ ಸಿದ್ಧ: ‘ಮಧ್ಯಂತರ ಚುನಾವಣೆಗೆ ಅವರು ಸಿದ್ಧ ಎಂದರೆ ನಾವು ಕೂಡ ಸಿದ್ಧ. ಚುನಾವಣೆ ಬಂದರೆ ಎದುರಿಸಬೇಕಲ್ಲವೇ?. ಸರಕಾರ ಬಿದ್ದುಹೋದರೆ ನಾವು ಸಿದ್ಧತೆ ಮಾಡಿಕೊಳ್ಳಬೇಕು, ನಮ್ಮದು ಜವಾಬ್ದಾರಿ. ಆದರೆ, ನಾನು ಮಧ್ಯಂತರ ಚುನಾವಣೆಯ ಬಗ್ಗೆ ಚರ್ಚೆ ಮಾಡಲು ಹೋಗುವುದಿಲ್ಲ. ಈ ಸರಕಾರಕ್ಕೆ 136 ಮಂದಿ ಶಾಸಕರಿದ್ದು, ತಮ್ಮಲ್ಲಿನ ಭಿನ್ನಮತ ಬಗೆಹರಿಸಿಕೊಂಡರೆ ಸರಕಾರ ಪೂರ್ಣಾವಧಿ ಇರುತ್ತದೆ, ಇಲ್ಲವಾದರೆ ಹೋಗುತ್ತದೆ’ ಎಂದರು.







