ರಾಜ್ಯದಲ್ಲಿ ʼವೋಟ್ ಚೋರಿʼ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ : ಎಚ್.ಡಿ. ಕುಮಾರಸ್ವಾಮಿ ಆರೋಪ

ಬೆಂಗಳೂರು : ರಾಜ್ಯದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ವೋಟ್ ಚೋರಿ ಮೂಲಕವೇ ಅಧಿಕಾರಕ್ಕೆ ಬಂದಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.
ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಎರ್ನಾಕುಲಂ - ಕೆಎಸ್‌ಆರ್ ಬೆಂಗಳೂರು ನಡುವೆ ಹೊಸದಾಗಿ ಆರಂಭವಾಗಿರುವ ವಂದೇ ಭಾರತ್ ರೈಲಿಗೆ ಸ್ವಾಗತ ಕೋರಿದ ನಂತರ ಕೇಂದ್ರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು.
ಬಿಜೆಪಿ ವೋಟ್ ಚೋರಿಯಿಂದಲೇ ಗೆದ್ದಿದೆ. ಸಿಎಂ, ಡಿಸಿಎಂ ಆರೋಪ ಮಾಡಿರುವುದು ಸರಿಯಲ್ಲ. ನಿಜಕ್ಕೂ ಆರೋಪ ಮಾಡಿರುವವರೇ ವೋಟ್ ಚೋರಿ ಮಾಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಹಾಗಾದ್ರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ 136 ಸೀಟು ಬರುತ್ತೆ ಎಂದು ಅಷ್ಟು ನಿಖರವಾಗಿ ಹೇಗೆ ಹೇಳಿದರು? ಆ ಸಂಖ್ಯೆ ಅವರಿಗೆ ಹೇಗೆ ಗೊತ್ತಿತ್ತು? ಯಾವ ಆಧಾರದಲ್ಲಿ 136 ಸೀಟು ಬರುತ್ತೆ ಅಂತ ಹೇಳಿದರು? ಮತ ಕಳ್ಳತನ ಮಾಡಿರುವುದೇ ಕಾಂಗ್ರೆಸ್ ಪಕ್ಷ. ಈಗ ನೋಡಿದರೆ ಮೋದಿ ಅವರನ್ನು ಟೀಕೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಬಿಜೆಪಿಗೆ 67 ಸೀಟು ಬಂದು ನಿಲ್ಲೋಕೆ ಚೋರಿ ಮಾಡಿದ್ರಾ? ಕಾಂಗ್ರೆಸ್ ನವರು ಜನರನ್ನು ಯಾಮಾರಿಸಿ ಈ ರೀತಿಯ ವ್ಯರ್ಥ ಹೇಳಿಕೆ ಕೊಟ್ಟು ಸಮಯ ವ್ಯರ್ಥ ಮಾಡುತ್ತಿದ್ದಾರೆ. ರಾಜ್ಯದಲಿ ಅನೇಕ ಗಂಭೀರ ಸಮಸ್ಯೆಗಳನ್ನು ಜನ ಎದುರಿಸುತ್ತಿದ್ದಾರೆ. ಅದರ ಬಗ್ಗೆ ಇವರ ಗಮನ ಇರಬೇಕು ಎಂದು ಸಚಿವರು ತರಾಟೆಗೆ ತೆಗೆದುಕೊಂಡರು.





