ಮಾವು ಬೆಳೆಗಾರರ ಬಗೆಗಿನ ನನ್ನ ಮನವಿಗೆ ಕೇಂದ್ರ ಸ್ಪಂದಿಸಿದೆ : ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ರಾಜ್ಯದಲ್ಲಿ ಮಾವು ಬೆಳೆಗಾರರಿಗೆ ಕೇಂದ್ರ ಸರಕಾರ ಸಹಾಯಧನ ಘೋಷಣೆ ಮಾಡಿದ್ದು, ಈ ಸಂಬಂಧ ನಾನು ನಡೆಸಿದ ಸುದೀರ್ಘ ಚರ್ಚೆ, ಮನವಿಗೆ ಸ್ಪಂದಿಸಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಗುರುವಾರ ಈ ಕುರಿತು ಹೊಸದಿಲ್ಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ವಾತಾವರಣ ವೈಪರಿತ್ಯ ಮತ್ತು ಬೆಲೆ ಕುಸಿತದಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದ ಮಾವು ಬೆಳೆಗಾರರಿಗೆ ನೆರವಿನ ಹಸ್ತ ಚಾಚಿರುವ ಕೇಂದ್ರವು, ಮಾರುಕಟ್ಟೆ ಹಸ್ತಕ್ಷೇಪ ಯೋಜನೆ ಅಡಿಯಲ್ಲಿ 1.30 ಲಕ್ಷ ಮೆಟ್ರಿಕ್ ಟನ್ ಮಾವಿಗೆ ಪ್ರತಿ ಕ್ವಿಂಟಲ್‍ಗೆ 1,750 ನೆರವು ಘೋಷಿಸಿದೆ.
ಈ ಸಂಬಂಧ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ, ತ್ವರಿತವಾಗಿ ಮಾವು ಬೆಳೆಗಾರರ ರಕ್ಷಣೆಗೆ ಧಾವಿಸಬೇಕು ಎಂದು ಮನವಿ ಮಾಡಿದ್ದೇ. ಅದರಂತೆ ಮನವಿಗೆ ಸ್ಪಂದಿಸಿದ್ದ ಚೌಹಾಣ್ ಅವರು, ಮಾವು ಬೆಳೆಗಾರರಿಗೆ ಆರ್ಥಿಕ ನೆರವು ಘೋಷಿಸಿದ್ದಾರೆ ಎಂದು ತಿಳಿಸಿದ್ದಾರೆ.
ನನ್ನ ಮನವಿಗೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ ಕೃಷಿ ಸಚಿವರು ಅತ್ಯಂತ ತ್ವರಿತವಾಗಿ ಮಾವು ಬೆಳೆಗಾರರಿಗೆ ಅನುಕೂಲವಾಗುವ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅವರ ಸ್ಪಂದನೆಗೆ ನನ್ನ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ರೈತರನ್ನು ಬೆಲೆ ಕುಸಿತ ಹಾಗೂ ಹವಾಮಾನ ವೈಪರೀತ್ಯದಂತಹ ಸಂಕಷ್ಟಗಳಿಂದ ಸಕಾಲದಲ್ಲಿ ಪಾರು ಮಾಡಲು ಕೇಂದ್ರ ಸರಕಾರವು ಅವಿರತವಾಗಿ ಶ್ರಮಿಸುತ್ತಿದೆ ಮತ್ತು ಬದ್ಧವಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.






