ಪ್ರಗತಿ ಪರಿಶೀಲನಾ ನೆಪದಲ್ಲಿ ಡಿ.ಕೆ.ಶಿವಕುಮಾರ್ ಜಾಲಿ ಟ್ರಿಪ್ : ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ಪ್ರಗತಿ ಪರಿಶೀಲನೆ, ಎಸ್‍ಐಆರ್ ಪ್ರಕ್ರಿಯೆ ನೆಪದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಾಲಿ ಟ್ರಿಪ್ ಮಾಡುತ್ತಿದ್ದು, ಕೇವಲ ಔತಣಕೂಟಗಳಿಗೆ ಅವರ ಜಿಲ್ಲಾ ಪ್ರವಾಸ ಸೀಮಿತವಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಶುಕ್ರವಾರ ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜನರ ಸಮಸ್ಯೆಗಳ ಬಗ್ಗೆ ಪ್ರವಾಸ ಮಾಡುತ್ತಿದ್ದಾರೆ ಎಂದು ಭಾವಿಸಿದ್ದೆ. ರಾಜ್ಯ ಒಂದು ಕಡೆ ಬರ, ಮತ್ತೊಂದು ಕಡೆ ಪ್ರವಾಹ ಪರಿಸ್ಥಿತಿ ಎದುರಿಸುತ್ತಿದೆ. ಇಂತಹ ಘಟನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಜಾಲಿ ಟ್ರಿಪ್ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಕುಡಿಯುವ ನೀರಿನ ಉದ್ದೇಶಕ್ಕೆ ಪ್ರತಿ ಕ್ಷೇತ್ರಕ್ಕೆ ಒಂದು ಕೋಟಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಈ ಹಣವನ್ನು ಎಲ್ಲಿಂದ ತಂದು ಕೊಡುತ್ತಾರೆ, ಇದಕ್ಕೇನಾದರೂ ಕ್ರಿಯಾಯೋಜನೆ ರೂಪಿಸಿದ್ದಾರೆಯೇ ಎಂದು ಪ್ರಶ್ನಿಸಿದರು.
ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಭಾಗದ ಜನರು ಬರ ಮತ್ತು ನೆರೆ ಸಂಕಷ್ಟಕ್ಕೆ ಸಿಲುಕಿ ಬೇರೆ ಬೇರೆ ಕಡೆಗಳಿಗೆ ಕೆಲಸಕ್ಕಾಗಿ ಗುಳೆ ಹೋಗುತ್ತಿದ್ದಾರೆ. ಮುಖ್ಯಮಂತ್ರಿಗೆ ಇದರ ಪರಿವೇ ಇಲ್ಲದೆ ಸುಖಾ ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ. ಸಾಲಮನ್ನಾ ಮಾಡಲು ಕಷ್ಟ ಎಂದು ಸಿಎಂ ಹೇಳಿದ್ದಾರೆ. ಇನ್ನೊಂದು ಕಡೆ ಚಿಂತನೆ ಮಾಡುತ್ತೇವೆ ಎನ್ನುತ್ತಾರೆ. ಬರದಿಂದ ಜನ ಗುಳೆ ಹೋಗ್ತಾ ಇದ್ದಾರೆ. ಸಿಎಂ ಗಾಣಗಾಪುರಕ್ಕೆ ದೇವರ ದರ್ಶನಕ್ಕೆ ಹೋಗಿದ್ದರು. ಅಲ್ಲಿನ ಹೆಣ್ಣುಮಗಳು ಒಬ್ಬರು ಬರದ ದರ್ಶನ ಮಾಡಿಸಿದ್ದರು. ಉತ್ತರ ಕರ್ನಾಟಕದ ಹಳ್ಳಿಗಳು ಪರಿಸ್ಥಿತಿ ಏನಿದೆ ಎಂಬುದು ಮುಖ್ಯಮಂತ್ರಿಗೆ ಗೊತ್ತಿಲ್ಲ. ಬೆಳಗಾವಿಯಲ್ಲಿ 20 ಶಾಸಕರ ಜತೆ ರಾತ್ರಿ ಔತಣ ಕೂಟ ಮಾಡಿದರು. ಆದರೆ ಜನರ ಊಟದ ಬಗ್ಗೆ ಮುಖ್ಯಮಂತ್ರಿ ಯಾವುದೇ ಆಶ್ವಾಸನೆ ನೀಡಲಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಇತ್ತ ಕಲಬುರಗಿಯಲ್ಲೂ ಪ್ರವಾಸ ಮಾಡಿದರು. ಬೀದರ್ ನಲ್ಲಿ ಅನುಭವ ಮಂಟಪ ದರ್ಶನ ಮಾಡಿ ಆ ಬಳಿಕ ಕಾಂಗ್ರೆಸ್ ಸಭೆ ಮಾಡಿದರು. ಆ ಸಭೆಗೆ ಮಾಧ್ಯಮಗಳಿಗೆ ಪ್ರವೇಶ ಇರಲಿಲ್ಲ. ಸಭೆಗಳನ್ನು ಗೌಪ್ಯವಾಗಿ ನಡೆಸುತ್ತಾರೆ. ಮಾಧ್ಯಮಗಳಿಗೆ ಏನೂ ಗೊತ್ತಾಗುವಂತೆ ಇಲ್ಲ. ಪ್ರಗತಿ ಪರಿಶೀಲನೆ ಸಭೆಯಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಬಗ್ಗೆ ಚರ್ಚೆ ಮಾಡಿದ್ದಾರೆ. ಅಧಿಕಾರಿಗಳಿಗೆ ಜನರ ಸಮಸ್ಯೆಗಳು ಕುರಿತಂತೆ ಆದೇಶಗಳನ್ನು ಕೊಡುವುದು ಬಿಟ್ಟು ಸರಿಯಾಗಿ ಎಸ್‍ಐಆರ್ ನಡೆಸಿ ಎಂದು ಕಟ್ಟಪ್ಪಣೆ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.






