‘ಸ್ಟಿಂಗ್ ಆಪರೇಷನ್’ ಪ್ರಕರಣ : ಸಚಿವ ಝಮೀರ್ ವಿಡಿಯೋ ಹರಿಬಿಟ್ಟಿರುವ ಅನುಮಾನ : ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ತಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಅವರೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತಾದ ‘ಸ್ಟಿಂಗ್ ಆಪರೇಷನ್’ ವಿಡಿಯೊ ಹರಿಬಿಟ್ಟಿರುವ ಅನುಮಾನ, ಚರ್ಚೆ ಇದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವತಃ ಸಿದ್ದರಾಮಯ್ಯ ಅವರೇ ಝಮೀರ್ ಅಹ್ಮದ್ ಖಾನ್ ಅವರನ್ನು ಸಚಿವ ಸಂಪುಟದಿಂದ ಹೊರಗಿಡಬೇಕೆಂದು ಹೊಸದಿಲ್ಲಿಯ ನಾಯಕರ ಬಾಗಿಲಿಗೆ ತೆರಳಿದ್ದರು. ಇಂತಹ ಸಂದರ್ಭದಲ್ಲಿ ತಮ್ಮ ಸಚಿವ ಸ್ಥಾನ ಉಳಿಸಿಕೊಳ್ಳಲು ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಏಕೆ ಈ ‘ಸ್ಟಿಂಗ್ ಆಪರೇಷನ್’ ವಿಡಿಯೊ ಹರಿಬಿಟ್ಟಿರುವ ಶಂಕೆ ಇದೆ. ಈ ಕುರಿತು ಚರ್ಚೆಯೂ ನಡೆಯುತ್ತಿದೆ ಎಂದರು.
ತನಿಖೆ ನಡೆಸಿ: ರಾಜ್ಯದಲ್ಲಿ ಸ್ಟಿಂಗ್ ಅಪರೇಷನ್ ದೊಡ್ಡದಾಗಿ ಸದ್ದು ಮಾಡುತ್ತಿದೆ. ಸ್ಟಿಂಗ್ ಮಾಡಲು 10ರಿಂದ 15 ಕೋಟಿ ರೂ., ಖರ್ಚು ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಅದರ ಬಗ್ಗೆ ಜಾರಿ ನಿರ್ದೇಶನಾಲಯ ಮತ್ತು ತೆರಿಗೆ ಇಲಾಖೆ ತನಿಖೆ ನಡೆಸಬೇಕು ಎಂದು ಅವರು ಹೇಳಿದರು.




