‘ಸ್ಟಿಂಗ್ ಆಪರೇಷನ್’ ಆರೋಪಿಗಳನ್ನು ಬಂಧಿಸಲು ಎಚ್.ಡಿ.ಕುಮಾರಸ್ವಾಮಿ ಒತ್ತಾಯ
ಪಾದಯಾತ್ರೆ ನಡೆಸಿ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಮುತ್ತಿಗೆ; ಜೆಡಿಎಸ್ ದೂರು ಸಲ್ಲಿಕೆ

ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬೆದರಿಕೆ ಹಾಕುವ ಪತ್ರಕರ್ತ ರಾಕೇಶ್ ಶೆಟ್ಟಿ ಸಂಘಟಿತ ಸಂಚು ನಡೆಸಿ ಸಿದ್ದರಾಮಯ್ಯರ ವಿರುದ್ಧ ‘ಸ್ಟಿಂಗ್ ಆಪರೇಷನ್’ ನಡೆಸಿ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಯುವಂತೆ ಮಾಡಿದ್ದಾರೆ. ಹೀಗಾಗಿ ‘ಸ್ಟಿಂಗ್ ಆಪರೇಷನ್’ನಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಶನಿವಾರ ನಗರದ ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆ.ಪಿ ಭವನದಿಂದ ಪಾದಯಾತ್ರೆ ಆರಂಭಿಸಿದ ಅವರು, ಪಕ್ಷದ ಕಾರ್ಯಕರ್ತರು, ಮುಖಂಡರೊಂದಿಗೆ ಇಲ್ಲಿನ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ, ಸ್ಟಿಂಗ್ ಆಪರೇಷನ್ ಕಿಂಗ್ ಪಿನ್ಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ ನಡೆಸಿದ ಕಾರ್ಯಾಚರಣೆಯಲ್ಲಿ ನೇರವಾಗಿ ಭಾಗಿಯಾಗಿರುವ ರಾಕೇಶ್ ಶೆಟ್ಟಿ, ಬಾಗೇಪಲ್ಲಿ ಪ್ರಶಾಂತ್ ಹಾಗೂ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.
ಇದೇ ವೇಳೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಬಂಡೆಪ್ಪ ಕಾಶೆಂಪುರ, ಸಾ.ರಾ.ಮಹೇಶ್, ವೆಂಕಟರಾವ್ ನಾಡಗೌಡ, ಡಿ.ಸಿ.ತಮ್ಮಣ್ಣ, ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾ ರೆಡ್ಡಿ, ಸಂಸದ ಎಂ.ಮಲ್ಲೇಶ್ ಬಾಬು, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ರಮೇಶ್ ಗೌಡ, ಶಾಸಕರಾದ ಟಿ.ಎ.ಶರವಣ, ಕರೆಮ್ಮ ನಾಯಕ, ಮಂಜುನಾಥ್, ಸಿ.ಎನ್.ಮಂಜೇಗೌಡ, ಮಾಜಿ ಶಾಸಕರಾದ ಕೆ.ಅನ್ನದಾನಿ, ಎ.ಮಂಜುನಾಥ್, ಅಖಂಡ ಶ್ರೀನಿವಾಸಮೂರ್ತಿ, ಶಿವಶಂಕರ್, ದೊಡ್ಡನಗೌಡ ಪಾಟೀಲ, ವಕ್ತಾರರಾದ ದೇವರಾಜ್, ಪ್ರದೀಪ್ ಕುಮಾರ್, ಯುವ ಮುಖಂಡ ಪ್ರವೀಣ್ ಸೇರಿದಂತೆ ಅನೇಕರು ಇದ್ದರು.
ಜೆಡಿಎಸ್ ದೂರು ಸಲ್ಲಿಕೆ: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ನೇತೃತದ ಎಲ್ಲ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಸಹಿ ಮಾಡಿ ಸಲ್ಲಿಸಿರುವ ದೂರನ್ನು ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಅವರಿಗೆ ಸಲ್ಲಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆನ್ವಯ ಸೆಕ್ಷನ್ 65, 66, 67 ಅಡಿಯಲ್ಲಿ ಹಾಗೂ ಬಿಎನ್ಎಸ್ ಕಾಯಿದೆಯ ಸೆಕ್ಷನ್ 38, 61, 77, 79, 336, 338, 356, 239, 308 ಅಡಿಯಲ್ಲಿ ಕೂಡಲೇ ಕ್ರಮ ಜರುಗಿಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದಲ್ಲಿ ಮುಂದೆ ವಿಚಾರಣೆಗೆ ಒಳಪಡಿಸಬೇಕಾಗಿದೆ. ಇಲ್ಲವಾದಲ್ಲಿ ನಮ್ಮ ಪಕ್ಷದ ವತಿಯಿಂದ ರಾಜ್ಯಾದಾದ್ಯಂತ ರಾಜ್ಯ ಸರಕಾರದ ನಿರ್ಲಕ್ಷತೆ ಮತ್ತು ನಿಷ್ಕ್ರಿಯತೆ ವಿರುದ್ದ ಪ್ರತಿಭಟನೆಯನ್ನು ಕೈಗೊಳ್ಳಲಾಗುವುದು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.






