ಕಾಂಗ್ರೆಸ್ ಒಳ ರಾಜಕೀಯದ ಫಲವೇ ‘ಸ್ಟಿಂಗ್’: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ‘ಸ್ಟಿಂಗ್’ ಮಾಡಿದ್ದು ಯಾರು?. ಅದರ ಮಾಸ್ಟರ್ ಮೈಂಡ್, ಕಿಂಗ್‍ಪಿನ್ ಯಾರು?. ಶೂಟಿಂಗ್ ಮಾಡುವ ವೇಳೆ ರಾಕೇಶ್ ಶೆಟ್ಟಿಗೆ ಸಹಕರಿಸಿದ ಕಾಂಗ್ರೆಸ್‍ನ ಮಹಿಳಾಮಣಿ ಯಾರು? ಎಂಬುದು ಜಗಜ್ಜಾಹೀರಾಗಿದೆ. ಇನ್ನು ಯಾವ ಮುಖ ಇಟ್ಟುಕೊಂಡು ಸಿಎಂ ದಿಲ್ಲಿ ನಾಯಕರಿಗೆ ವರದಿ ನೀಡುತ್ತಾರೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಶುಕ್ರವಾರ ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟಿಂಗ್ ಷಡ್ಯಂತ್ರ್ಯದಲ್ಲಿ ಕಾಂಗ್ರೆಸ್ ನಾಯಕರೇ ನೇರ ಶಾಮೀಲಾಗಿದ್ದಾರೆ. ಈ ಸಿಂಡಿಕೇಟ್‍ನಲ್ಲಿ ಹಾಲಿ ಸಿಎಂ ಅವರು ಇದ್ದಾರೆ. ಆದರೆ, ಅವರು ಅಂಗೈ ಹುಣ್ಣಿಗೆ ಕನ್ನಡಿ ಹುಡುಕುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಈ ಬಗ್ಗೆ ಅಗತ್ಯವಿದ್ದರೆ ಸಿದ್ದರಾಮಯ್ಯರನ್ನು ಭೇಟಿ ಮಾಡಲು ತಯಾರಿದ್ದೇನೆ. ಅವರು ನಮ್ಮ ಪಕ್ಷದಲ್ಲಿದ್ದವರು, ಅವರನ್ನು ಭೇಟಿ ಮಾಡುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಹಾಗೆಯೇ, ‘ಸ್ಟಿಂಗ್’ ಪಿನ್ ರಾಕೇಶ್ ಶೆಟ್ಟಿಯನ್ನು ಕೋರ್ಟ್ ಕ್ರಮದಿಂದ ಪಾರು ಮಾಡಲು ಸ್ವತಃ ಸರಕಾರದ ಉನ್ನತ ವ್ಯಕ್ತಿಗಳೇ ಪ್ರಯತ್ನ ಮಾಡುತ್ತಿದ್ದಾರೆ. ಅವನಿಗೆ ಸುಲಭವಾಗಿ ಜಾಮೀನು ಸಿಗುವಂತೆ ಮಾಡಲು ಕೆಲ ಪೊಲೀಸ್ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪ ಮಾಡಿದರು.
ಈ ಹಿಂದೆಯೂ ಈ ರಾಕೇಶ್ ಶೆಟ್ಟಿಯನ್ನು ಅನೇಕ ಪ್ರಕರಣಗಳಿಂದ ರಕ್ಷಣೆ ಮಾಡಲಾಗಿದೆ. ಆತನ ನಿಮ್ಮಂತೆಯೇ (ಪತ್ರಕರ್ತರು) ಕೆಲಸ ಮಾಡುತ್ತಿದ್ದ ವಿಕ್ಕಿ ಎಂಬ ಯುವಕನ ಸಾವು ಅನುಮಾನಾಸ್ಪದ. ಆರೋಪಿ ನಡೆಸುವ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಆ ವ್ಯಕ್ತಿ ಸ್ಟಿಂಗ್ ಕಾರ್ಯಾಚರಣೆಗಳಿಗೆ ಸಂಬಂಧಿಸಿದವರಾಗಿದ್ದರೋ ಇಲ್ಲವೋ ಎಂಬುದು ಬೇರೆ ವಿಚಾರ. ಆ ಯುವಕನ್ನು ದುರುಪಯೋಗಪಡಿಸಿಕೊಂಡಿರಬಹುದು ಎಂದು ಅವರು ದೂರಿದರು.
ರಾಕೇಶ್ ಶೆಟ್ಟಿ ಬಳಿ ಇನ್ನೂ ಪ್ರಸಾರವಾಗದ ನೂರಾರು ಸ್ಟಿಂಗ್ ವೀಡಿಯೊಗಳಿದ್ದವು ಮತ್ತು ಅವುಗಳನ್ನು ಪೊಲೀಸ್ ಅಧಿಕಾರಿಗಳು, ಸಂವಿಧಾನ ಸಂಸ್ಥೆಗಳ ಉನ್ನತ ಹುದ್ದೆಗಳಲ್ಲಿರುವ ಗಣ್ಯರು ಸೇರಿ ವಿವಿಧ ಪ್ರಮುಖರನ್ನು ಬ್ಲ್ಯಾಕ್‍ಮೇಲ್ ಮಾಡಿ ಹಣ ಸುಲಿಗೆಗೆ ಬಳಸಲಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ ಗಣ್ಯರಿಗೆ ಸಂಬಂಧಿಸಿದ ವೀಡಿಯೊ ಬಗ್ಗೆ ಹೈಕೋರ್ಟ್‍ನ ಜಾಗೃತಾ ವಿಭಾಗದಲ್ಲಿ ದೂರು ದಾಖಲಾಗಿತ್ತು ಎಂದು ಅವರು ಹೇಳಿದರು.
ಈ ಎಲ್ಲ ಆರೋಪಗಳನ್ನು ಎದುರಿಸುತ್ತಿರವ ಕಟ್ಟ ವ್ಯಕ್ತಿಗೆ ಸುಲಭವಾಗಿ ಜಾಮೀನು ದೊರಕುವಂತೆ ಸರಕಾರದ ಷಡ್ಯಂತ್ರ್ಯ ನಡೆಯುತ್ತಿದೆ. ಕೆಲ ಅಧಿಕಾರಿಗಳೇ ಇದೇ ಕೆಲಸ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. ಆ ವ್ಯಕ್ತಿಯನ್ನು ಹೊರಗೆ ಬಿಟ್ಟರೆ ಸ್ಟಿಂಗ್‍ಗೆ ಸಂಬಂಧಿಸಿದ ಎಲ್ಲ ಸಾಕ್ಷ್ಯಗಳನ್ನು ನಾಶ ಮಾಡುವ ಅಪಾಯವಿದೆ ಎಂದು ಅವರು ತಿಳಿಸಿದರು.
ದ್ವೇಷದ ಆರೋಪಕ್ಕೆ ಉತ್ತರ: ‘ಕನಕಪುರದಲ್ಲಿ ಬಿಎಸ್‍ಪಿ ಹೋರಾಟ ವರ್ಸಸ್ ಡಿ.ಕೆ.ಶಿವಕುಮಾರ್’ ಎಂಬ ಪುಸ್ತಕ ಪ್ರದರ್ಶಿಸಿ, ಈ ಪುಸ್ತಕವನ್ನು ಒಮ್ಮೆ ಓದಿ. ಆ ವ್ಯಕ್ತಿಯನ್ನು ಮುಖ್ಯಮಂತ್ರಿ ಎಂದು ಕರೆಯಲು ಆಗುತ್ತದಾ?, ಇಲ್ಲವಾ? ಎಂಬುದು ಗೊತ್ತಾಗುತ್ತದೆ. ಭ್ರಷ್ಟಾ ಚಾರದ ವಿರುದ್ಧ ಹೋರಾಟ ಮಾಡುವುದು ನನ್ನ ಉದ್ದೇಶವೇ ಹೊರತು, ಇದರಲ್ಲಿ ಯಾವುದೇ ರಾಜಕೀಯ ದ್ವೇಷವಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಒಳ ರಾಜಕೀಯದ ಫಲವೇ ಸ್ಟಿಂಗ್: ಸಿದ್ದರಾಮಯ್ಯರ ಹೆಸರು ಕೆಡಿಸಲು ‘ಸ್ಟಿಂಗ್’ ವಿಷಯ ಎಳೆದು ತರಲಾಗಿದೆ. ಆ ಮೂಲಕ ಅವರ ಗೌರವಕ್ಕೆ ಧಕ್ಕೆ ತರಲು ಯಾಕೆ ಪ್ರಯತ್ನಿಸಿದರು. ಈ ಘಟನೆ 2011ರಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದ್ದರೆ, ಸಂಬಂಧಿಸಿದ ಮಹಿಳೆಯನ್ನು 2023ರಲ್ಲಿ ಕೂರಿಸಿಕೊಂಡು ‘ಸ್ಟಿಂಗ್’ ಕಾರ್ಯಾಚರಣೆ ನಡೆಸಿದ್ದು ಏಕೆ? ವಿಷಯ ಎರಡೂವರೆ ವರ್ಷದಿಂದ ಗೊತ್ತಿದ್ದರೆ ಇಷ್ಟು ಕಾಲ ಏಕೆ ಕ್ರಮ ಕೈಗೊಳ್ಳಲಿಲ್ಲ? ಎಂದು ಅವರು ಪ್ರಶ್ನಿಸಿದರು.
ಸ್ಟಿಂಗ್‍ನಲ್ಲಿ ಕಾಂಗ್ರೆಸ್‍ನ ಮಹಿಳಾ ನಾಯಕಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‍ಗೆ ಹತ್ತಿರದ ವ್ಯಕ್ತಿ ಎಂದು ಹೇಳಲಾದವರ ಬಗ್ಗೆ ಉಲ್ಲೇಖವಿದೆ. ರಾಕೇಶ್ ಶೆಟ್ಟಿ ಜತೆಗಿದ್ದ ಆ ಮಹಿಳೆಯನ್ನು ಬಂಧಿಸಿದ್ದಾರೆಯೇ? ಅಥವಾ ವಿಚಾರಣೆಗೆ ಕರೆಸಿದ್ದಾರೆಯೇ? ಈ ಪ್ರಶ್ನೆಗೆ ಸರಕಾರ ಉತ್ತರ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಜೆಡಿಎಸ್ ಕಾರ್ಯಕರ್ತರಿಗೆ ನೋಟಿಸ್ ನೀಡಲಾಗುತ್ತಿದೆ. ಆದರೆ ಸಂಬಂಧಪಟ್ಟವರ ವಿಚಾರಣೆ ಮತ್ತು ಸ್ಟಿಂಗ್‍ನ ಸತ್ಯಾಸತ್ಯತೆ ಬಗ್ಗೆ ಸ್ಪಷ್ಟನೆ ಇಲ್ಲ. ತಮ್ಮ ಪಕ್ಷದವರು ಡಿಜಿ ಕಚೇರಿಗೆ ಪಾದಯಾತ್ರೆ ನಡೆಸಿದಾಗ ‘ಸಾಕ್ಷಿ ಕೊಡಿ’ ಎಂದು ಕೇಳಲಾಗಿದೆ. ಯಾವ ಸಾಕ್ಷಿ ನೀಡಬೇಕು, ಈ ವಿಷಯವನ್ನು ಬೀದಿಬೀದಿಗೆ ಹರಡುತ್ತಿರುವುದು ಯಾಕೆ ಎಂದು ಅವರು ಪ್ರಶ್ನಿಸಿದರು.






