ಮುಖ್ಯಮಂತ್ರಿಗೆ ಭ್ರಷ್ಟಾಚಾರದ ಬಗ್ಗೆ ನೋಡೋಕೆ ಸಮಯವಿಲ್ಲ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ಮುಖ್ಯಮಂತ್ರಿಗೆ ಭ್ರಷ್ಟಾಚಾರದ ಬಗ್ಗೆ ನೋಡೋಕೆ ಸಮಯ ಇಲ್ಲ. ಆದರೆ, ಖಾಲಿ ಜಾಗ ಎಲ್ಲಿದೆ, ಸರಕಾರಿ ಜಾಗ ಎಲ್ಲಿದೆ ಅಂತಾ ನೋಡೋಕಷ್ಟೇ ಸಮಯವಿದೆ. ಇತ್ತೀಚೆಗೆ ಬೆಂಗಳೂರಿನ ಸುತ್ತಮುತ್ತಲಿನಲ್ಲೆ ಜಾಗ ನೋಡೋಕೆ ಹೋದಾಗ ಕಳ್ಳರು ಬಂದಿದ್ದಾರೆ ಅಂತಾ ಹಳ್ಳಿ ಜನರು ಓಡಿಸಿಕೊಂಡು ಬಂದಿದ್ದರು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಶನಿವಾರ ಇಲ್ಲಿನ ಜಯನಗರದ ಕ್ಲೌಡ್‍ನೈನ್ ಆಸ್ಪತ್ರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಭ್ರಷ್ಟಾಚಾರ ನಡೆಯುತ್ತಿಲ್ಲ ಎನ್ನುತ್ತಿದ್ದಾರೆ. ಆದರೆ ಇಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿದೆ ಎಂದು ದೂರಿದರು.
ಇತ್ತೀಚೆಗೆ 20 ಗುಂಟೆ ಜಮೀನಿಗೆ ಕಂದಾಯ ನಿರೀಕ್ಷಕ (ರೆವಿನ್ಯೂ ಇನ್ಸ್‍ಪೆಕ್ಟರ್) 50 ಸಾವಿರ ರೂ. ಲಂಚ ತಗೊಂಡು ಅಮಾನತು ಆಗಿದ್ದಾರೆ. ಅದು ಭ್ರಷ್ಟಾಚಾರ ಅಲ್ವಾ? ಅವರ ಸಚಿವರು ಹೇಳಿದ ಹಾಗೆ ಅದು ಗೌರವಧನನಾ? ಗೌರವದಿಂದ ಕೊಡಬೇಕು ಅಂದರಲ್ಲ ಅದಾ ಭ್ರಷ್ಟಾಚಾರವಾ.. ಅಲ್ಲವಾ? ಎಷ್ಟೋ ಕಡೆ ಕೆಲಸ ಮಾಡಲು ದುಡ್ಡು ತಗೊಂಡು ಸಿಕ್ಕಿಬೀಳುತ್ತಿದ್ದಾರೆ. ನನ್ನ ಬಳಿ ಟನ್‍ಗಟ್ಟಲೇ ದಾಖಲೆಗಳಿವೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿಗಳು ಸೋಂಪುರ ಹತ್ತಿರ ಅಥವಾ ಅದರ ಸುತ್ತಮುತ್ತಲಿನ ಯಾವುದೋ ಜಾಗದಲ್ಲಿ 150 ಎಕರೆ ಜಮೀನು ನೋಡುವುದಕ್ಕೆ ರಾತ್ರಿ ಹೊತ್ತಿನಲ್ಲಿ ಖಾಸಗಿ ಕಾರಿನಲ್ಲಿ ಹೋಗಿದ್ದರು. ಆಗ ಇಷ್ಟೋ ತ್ತಲ್ಲಿ ಯಾರೋ ಕಳ್ಳರು ಬಂದಿದ್ದಾರೆ ಎಂದು ಹಳ್ಳಿ ಜನರು ಓಡಿಸಿಕೊಂಡು ಬಂದಿದ್ದಾರೆ. ಇದು ಸುಳ್ಳೋ ನಿಜವೋ ಎಂಬುದನ್ನು ಮುಖ್ಯಮಂತ್ರಿಗಳನ್ನೆ ಕೇಳಿ ಎಂದು ಕುಮಾರಸ್ವಾಮಿ ತಿಳಿಸಿದರು.
ಮುಖ್ಯಮಂತ್ರಿ ಜಪಾನ್ ಗೆ ಹೋದರೂ ಕುಮಾರಸ್ವಾಮಿ ಹಾಗೂ ದೇವೇಗೌಡರದ್ದು ಸಾಕ್ಷಿಗುಡ್ಡೆ ಕೇಳುತ್ತಾರೆ. ಟೊಯೋಟಾ ಹರಿಯಾಣಕ್ಕೆ ಅಥವಾ ಮಹಾರಾಷ್ಟ್ರಕ್ಕೋ ಹೋಗುತ್ತಿತ್ತು. ಆಗ ದೇವೇಗೌಡರು ಮನವಿ ಮಾಡಿ ಟೊಯೋಟಾ ಕಂಪನಿಯನ್ನು ಇಲ್ಲಿಗೆ ತಂದರು. ಕಾಂಗ್ರೆಸ್ ನವರು ಅದಕ್ಕೆ ಮರಳು, ಇಟ್ಟಿಗೆ ಪೂರೈಸಲು ಪೈಪೋಟಿಗೆ ಬಿದ್ದು ದುಡ್ಡು ಮಾಡಿಕೊಂಡರು ಎಂದು ಅವರು ದೂರಿದರು.
ಟೊಯೊಟಾ ಕಂಪನಿಯವರು ತಮ್ಮ ಪ್ರಾಜೆಕ್ಟ್ 4ನ್ನು ಮಹಾರಾಷ್ಟ್ರಕ್ಕೆ ಯಾಕೆ ತೆಗೆದುಕೊಂಡು ಹೋದರು? ಅಲ್ಲಿ 25 ಸಾವಿರ ಕೋಟಿ ರೂ. ಹೂಡಿಕೆ ಮಾಡುತ್ತಿದ್ದಾರೆ. ಟೊಯೋಟಾದವರು ಮಹಾರಾಷ್ಟ್ರಕ್ಕೆ ಯಾಕೆ ಹೋದರು? ಇದಕ್ಕೆ ಯಾರು ಕಾರಣ? ಇವರು ಭ್ರಷ್ಟಾ ಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.






