ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಗೆ ಮಿಡಿದ ಎಚ್.ಡಿ.ಕುಮಾರಸ್ವಾಮಿ
ವೈದ್ಯರ ಸಲಹೆಯಂತೆ ಬಾಲಕಿಗೆ 2.50 ಲಕ್ಷ ರೂ. ಮೌಲ್ಯದ ಆಕ್ಸಿಜನ್ ಕಾನ್ಸಂಟ್ರೇಟರ್ ಕೊಡಿಸಿದ ಕೇಂದ್ರ ಸಚಿವ

ಬೆಂಗಳೂರು, ನ.12: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಯೊಬ್ಬಳಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ 2.50 ಲಕ್ಷ ರೂ. ಮೌಲ್ಯದ ಆಕ್ಸಿಜನ್ ಕಾನ್ಸೆಂಟ್ರೇಟರ್ ಕೊಡಿಸಿದ್ದಾರೆ.
ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಮರಳವಾಡಿ ಹೋಬಳಿಯ ಸುಂಡಘಟ್ಟ ಗ್ರಾಮದ ರಾಜಲಕ್ಷ್ಮಿ ಚಂದ್ರು ಎಂಬವರ ಪುತ್ರಿ 14 ವರ್ಷದ ನವ್ಯಶ್ರೀಯನ್ನು ಗುರುವಾರ ಬೆಳಗ್ಗೆ ಬೆಂಗಳೂರಿನ ಜೆಪಿ ನಗರದ ತಮ್ಮ ನಿವಾಸಕ್ಕೆ ಕರೆಸಿಕೊಂಡ ಸಚಿವರು ಆಕೆಗೆ ಆಕ್ಸಿಜನ್ ಕಾನ್ಸೆಂಟ್ರೇಟರ್ ಅನ್ನು ಹಸ್ತಾಂತರಿಸಿದರು.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬಾಲಕಿಗೆ ಅತ್ಯುತ್ತಮ ಗುಣಮಟ್ಟದ ಆಕ್ಸಿಜನ್ ಕಾನ್ಸಂಟ್ರೇಟರ್ ಅನ್ನು ಬಳಸಬೇಕು ಎಂದು ವೈದ್ಯರು ಸಲಹೆ ಮಾಡಿದ್ದರು. ದುಬಾರಿಯಾದ ಈ ಉಪಕರಣವನ್ನು ಖರೀದಿಸಲು ಸಾಧ್ಯವಾಗದೆ ಬಾಲಕಿಯ ಪೋಷಕರು ಸಚಿವ ಕುಮಾರಸ್ವಾಮಿಯವರ ನೆರವನ್ನು ಕೇಳಿದ್ದರು. ಕಳೆದ ಆಗಸ್ಟ್ 30ರಂದು ಜೆಪಿ ನಗರದ ನಿವಾಸದಲ್ಲಿ ಸಚಿವರನ್ನು ಭೇಟಿಯಾಗಿದ್ದ ಬಾಲಕಿಯ ಪೋಷಕರು ಈ ಬಗ್ಗೆ ತಮ್ಮ ಅಳಲು ತೋಡಿಕೊಂಡಿದ್ದರು.
ಬಾಲಕಿಯ ಪೋಷಕರ ಮನವಿಗೆ ಓಗೊಟ್ಟ ಕೇಂದ್ರ ಸಚಿವರು ತಕ್ಷಣವೇ ಮಗುವಿನ ಆರೋಗ್ಯಕ್ಕೆ ಸಂಬಂಧಿಸಿ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ತಮ್ಮ ಸ್ವಂತ ಖರ್ಚಿನಲ್ಲಿ ಬಾಲಕಿಗೆ ಅತ್ಯಗತ್ಯವಾಗಿ ಬೇಕಾಗಿದ್ದ ಇಗೋಜೆನ್ ರೋವ್ 6 ಪೋರ್ಟಬಲ್ ಆಕ್ಸಿಜನ್ ಕಾನ್ಸೆಂಟ್ರೇಟರ್ ಅನ್ನು ಖರೀದಿಸಿ ಆಕೆಯ ಪೋಷಕರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬಾಲಕಿಯ ಜೊತೆ ಕೆಲಕಾಲ ಮಾತನಾಡಿದ ಸಚಿವರು; ವೈದ್ಯರು ನೀಡುವ ಚಿಕಿತ್ಸೆಯನ್ನು ಚಾಚೂ ತಪ್ಪದಂತೆ ಪಡೆದುಕೊಳ್ಳಬೇಕು ಎಂದು ಸೂಚಿಸಿದರು. ಹಾಗೆ ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದ ನಿರ್ಲಕ್ಷ ಮಾಡದೆ ಕಾಲಕಾಲಕ್ಕೆ ಸರಿಯಾದ ಚಿಕಿತ್ಸೆ ಕೊಡಿಸಿ, ಆ ಬಗ್ಗೆ ನನಗೆ ಮಾಹಿತಿ ನೀಡುತ್ತೀರಿ ಎಂದು ಕುಮಾರಸ್ವಾಮಿ ಅವರು ಪೋಷಕರಿಗೆ ತಿಳಿಸಿದರು.
ತನ್ನ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರಿಗೆ ಬಾಲಕಿ ಕೃತಜ್ಞತೆಗಳನ್ನು ಸಲ್ಲಿಸಿದಳು.






