ತಾಲೂಕು, ಸಮುದಾಯ ಆರೋಗ್ಯ ಕೇಂದ್ರಗಳ ದತ್ತು ಪಡೆಯಲು ಸುತ್ತೋಲೆ ಹೊರಡಿಸಿದ ಆರೋಗ್ಯ ಇಲಾಖೆ

ಸಾಂದರ್ಭಿಕ ಚಿತ್ರ | PC : Image by senivpetro on Magnific
ಬೆಂಗಳೂರು : ರಾಜ್ಯದ ಗ್ರಾಮೀಣ ಮತ್ತು ತಾಲೂಕು ಮಟ್ಟದ ಜನರಿಗೆ ಉತ್ತಮ ಹಾಗೂ ಗುಣಮಟ್ಟದ ವೈದ್ಯಕೀಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಜಂಟಿ ಸಹಯೋಗದೊಂದಿಗೆ ರಾಜ್ಯದ ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ದತ್ತು ತೆಗೆದುಕೊಳ್ಳುವ ಕುರಿತು ಸುತ್ತೋಲೆಯನ್ನು ಹೊರಡಿಸಿದೆ.
ಮುಖ್ಯಮಂತ್ರಿಗಳ ‘ನೂರು ದಿನಗಳ ಮಹತ್ವಾಕಾಂಕ್ಷೆಯ ಕಾರ್ಯಕ್ರಮ’ದ ಅಡಿಯಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು, ಇದರ ಅನ್ವಯ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸರಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳು ತಲಾ ಒಂದು ತಾಲೂಕು ಆಸ್ಪತ್ರೆ, ಒಂದು ಸಮುದಾಯ ಆರೋಗ್ಯ ಕೇಂದ್ರ ಹಾಗೂ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ದತ್ತು ಪಡೆದು, ಅಗತ್ಯವಿರುವ ತಜ್ಞ ವೈದ್ಯಕೀಯ ಸೇವೆ, ತರಬೇತಿ, ಗುಣಮಟ್ಟ ಸುಧಾರಣೆ ಹಾಗೂ ಇತರ ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ.
ಯೋಜನೆಯ ಪ್ರಮುಖ ಅಂಶಗಳಾಗಿ ತಾಲೂಕು ಮಟ್ಟದಲ್ಲಿ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರ ಲಭ್ಯತೆ ಹೆಚ್ಚಿಸುವುದು, ಜಿಲ್ಲಾ ಆಸ್ಪತ್ರೆಗಳಲ್ಲಿ ರೋಗಿಗಳ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚಿನ ಸೇವೆ ಒದಗಿಸುವುದು ಹಾಗೂ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಸಹಕಾರ ಪಡೆಯುವುದಾಗಿದೆ. ಅಲ್ಲದೆ, ತಾಲೂಕು ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳ ನಡುವೆ ನಿಯಮಿತ ಸಂವಹನ ಹಾಗೂ ಸಿಎಂಇ ಮೂಲಕ ವೈದ್ಯರು ಮತ್ತು ಸಿಬ್ಬಂದಿಯ ಸಾಮಥ್ರ್ಯ ವೃದ್ಧಿಗೆ ಒತ್ತು ನೀಡಲಾಗಿದೆ.
ತಾಲೂಕು ಮತ್ತು ಗ್ರಾಮೀಣ ಮಟ್ಟದ ಆಸ್ಪತ್ರೆಗಳಲ್ಲಿ ಕೊರತೆ ಇರುವ ಸ್ತ್ರೀರೋಗ ತಜ್ಞರು, ಅರವಳಿಕೆ ತಜ್ಞರು, ಮಕ್ಕಳ ತಜ್ಞರು, ಮೂಳೆ ಮತ್ತು ಕೀಲು ತಜ್ಞರು ಸೇರಿದಂತೆ ವಿವಿಧ ಪರಿಣಿತ ವೈದ್ಯರನ್ನು ಈ ವೈದ್ಯಕೀಯ ಕಾಲೇಜುಗಳ ಮೂಲಕ ನಿಯೋಜಿಸಲಾಗುತ್ತದೆ. ನಗರದ ಆಸ್ಪತ್ರೆಗಳ ಮೇಲಿನ ಒತ್ತಡ ಮುಕ್ತಿ: ಸ್ಥಳೀಯವಾಗಿಯೇ ತಜ್ಞ ಚಿಕಿತ್ಸೆಗಳು ಲಭ್ಯವಾಗುವುದರಿಂದ ರೋಗಿಗಳು ಜಿಲ್ಲಾ ಆಸ್ಪತ್ರೆ ಅಥವಾ ದೊಡ್ಡ ಮೆಡಿಕಲ್ ಕಾಲೇಜುಗಳಿಗೆ ಅಲೆಯುವುದು ತಪ್ಪುತ್ತದೆ. ಇದರಿಂದ ಜಿಲ್ಲಾ ಆಸ್ಪತ್ರೆಗಳ ಜನಸಂದಣಿಯೂ ಕಡಿಮೆಯಾಗಲಿದೆ.
ತಾಲೂಕು ಆಸ್ಪತ್ರೆಗಳಲ್ಲಿ ಈಗಾಗಲೇ ಇರುವ ಮೂಲಸೌಕರ್ಯಗಳು, ವೈದ್ಯಕೀಯ ಉಪಕರಣಗಳು ಮತ್ತು ಹಾಸಿಗೆಗಳ ಗರಿಷ್ಠ ಬಳಕೆ ಸಾಧ್ಯವಾಗುತ್ತದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ, ಇಂಟರ್ನ್ಗಳಿಗೆ ಗ್ರಾಮೀಣ ಭಾಗದ ರೋಗಲಕ್ಷಣಗಳನ್ನು ಹತ್ತಿರದಿಂದ ಅರ್ಥಮಾಡಿಕೊಳ್ಳಲು ಮತ್ತು ಸಂಶೋಧನೆ ನಡೆಸಲು ಇದು ಉತ್ತಮ ಅವಕಾಶ ಕಲ್ಪಿಸುತ್ತದೆ.






