ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ರಾಜ್ಯಾದ್ಯಂತ ಮುನ್ನೆಚ್ಚರಿಕೆ: ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಸಮಾಲೋಚನೆ

ಬೆಂಗಳೂರು : ಸಾಂಕ್ರಾಮಿಕ ರೋಗಗಳು ಹಾಗೂ H1N1 ನಿಯಂತ್ರಣ ಮತ್ತು ಚಿಕಿತ್ಸಾ ಸಿದ್ಧತೆಗಳ ಕುರಿತು ಪರಿಶೀಲಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ.ಖಾದರ್ ಅವರು ರಾಜ್ಯದ ಎಲ್ಲಾ ಜಿಲ್ಲೆಗಳ ಆರೋಗ್ಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ವಿಡಿಯೋ ಸಂವಾದ ನಡೆಸಿದ್ದಾರೆ.
ಕರ್ನಾಟಕದಲ್ಲಿ ಋತುಮಾನದ ಜ್ವರ (ಇನ್‌ಫ್ಲುಯೆಂಜಾ) ನಿಯಂತ್ರಣಕ್ಕೆ ಸನ್ನದ್ಧತೆ ಮತ್ತು ಪ್ರತಿಕ್ರಿಯಾ ಕ್ರಮಗಳ ಬಲವರ್ಧನೆ
ಸಾಮಾನ್ಯವಾಗಿ ಫ್ಲೂ ಎಂದು ಕರೆಯಲಾಗುವ ಋತುಮಾನದ ಜ್ವರ (ಇನ್‌ಫ್ಲುಯೆಂಜಾ), ಇನ್‌ಫ್ಲುಯೆಂಜಾ ವೈರಸ್‌ಗಳಿಂದ ಉಂಟಾಗುವ ಸಾಂಕ್ರಾಮಿಕ ಉಸಿರಾಟದ ಕಾಯಿಲೆಯಾಗಿದೆ. ಕರ್ನಾಟಕದಲ್ಲಿ, ಇನ್‌ಫ್ಲುಯೆಂಜಾ ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ - ಜನವರಿಯಿಂದ ಮಾರ್ಚ್ ಮತ್ತು ಜುಲೈನಿಂದ ಸೆಪ್ಟೆಂಬರ್ ವರೆಗೆ ಹೆಚ್ಚಾಗುತ್ತದೆ. ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ಇನ್‌ಫ್ಲುಯೆಂಜಾವನ್ನು ಪತ್ತೆಹಚ್ಚಲು, ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಂಡಿದೆ.
ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಎಲ್ಲಾ ಹಿರಿಯ ಆರೋಗ್ಯ ಅಧಿಕಾರಿಗಳೊಂದಿಗೆ ಸಮಗ್ರ ಪರಿಶೀಲನಾ ಸಭೆಯನ್ನು ನಡೆಸಿದ್ದು, ಈ ಸಂದರ್ಭದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದರೂ ಅಥವಾ ಯಾವುದೇ ರೀತಿಯ ಪರಿಸ್ಥಿತಿ ಎದುರಾದರೂ ಅದನ್ನು ಸಮರ್ಥವಾಗಿ ನಿಭಾಯಿಸಲು ರಾಜ್ಯದ ಆರೋಗ್ಯ ವ್ಯವಸ್ಥೆಯು ಸಾಕಷ್ಟು ಮೂಲಸೌಕರ್ಯ ಹಾಗೂ ಅಗತ್ಯ ಔಷಧಿಗಳೊಂದಿಗೆ ಸಂಪೂರ್ಣವಾಗಿ ಸಜ್ಜಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಇನ್‌ಫ್ಲುಯೆಂಜಾ ಪರಿಸ್ಥಿತಿ:
ಇಂಟಿಗ್ರೇಟೆಡ್ ಹೆಲ್ತ್ ಇನ್ಫಾರ್ಮೇಷನ್ ಪ್ಲಾಟ್‌ಫಾರ್ಮ್ (IHIP) ನ ಕಣ್ಗಾವಲು ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ 22ನೇ ಆಗಸ್ಟ್ 2026 ರವರೆಗೆ 32 ಜಿಲ್ಲೆಗಳಲ್ಲಿ ಒಟ್ಟು 4,212 ಪ್ರಯೋಗಾಲಯ ದೃಢೀಕೃತ ಇನ್‌ಫ್ಲುಯೆಂಜಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. 2025 ರಲ್ಲಿ 4,583 ಪ್ರಕರಣಗಳು ಮತ್ತು 2024 ರಲ್ಲಿ 3,903 ಪ್ರಕರಣಗಳು ವರದಿಯಾಗಿದ್ದವು.
ರೋಗ ಪತ್ತೆ ಹಚ್ಚುವಿಕೆ ಮತ್ತು ಕಣ್ಗಾವಲು ವ್ಯವಸ್ಥೆಯ ಬಲವರ್ಧನೆ:
ರಾಜ್ಯದಲ್ಲಿ ಇನ್‌ಫ್ಲುಯೆಂಜಾ ಕಾಯಿಲೆ (ILI) ಮತ್ತು ತೀವ್ರ ಉಸಿರಾಟದ ಸೋಂಕು (SARI) ಗಳ ಪ್ರಕರಣಗಳನ್ನು ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಜಿಲ್ಲಾ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಮತ್ತು ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿಗದಿತ ಕಣ್ಗಾವಲು ಕೇಂದ್ರಗಳಾಗಿ ಗುರುತಿಸಲಾಗಿದೆ. ಇದರ ಜೊತೆಗೆ ICMR-NCDC ಲ್ಯಾಬ್ ಮೂಲಕ ಪ್ರಯೋಗಾಲಯ ಆಧಾರಿತ ಕಣ್ಗಾವಲನ್ನು ಕೈಗೊಳ್ಳಲಾಗುತ್ತಿದೆ. ರಾಜ್ಯ ಮತ್ತು ವೈದ್ಯಕೀಯ ಕಾಲೇಜುಗಳ ವೈರಲ್ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯಗಳು (VRDL) ಹಾಗೂ ನಿಮ್ಹಾನ್ಸ್ (NIMHANS) ಸೇರಿದಂತೆ ಸಂಬಂಧಿತ ಪ್ರಯೋಗಾಲಯಗಳಲ್ಲಿ ಅಗತ್ಯ ಮಾದರಿ ಸಂಗ್ರಹಣೆ, ಪ್ರಯೋಗಾಲಯ ಬಳಕೆಯ ಸಾಮಗ್ರಿಗಳ ಲಭ್ಯತೆ ಹಾಗೂ ಸಕಾಲಿಕ ಪರೀಕ್ಷೆಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ರಾಜ್ಯಾದ್ಯಂತದ ಎಲ್ಲಾ ಆರೋಗ್ಯ ಕೇಂದ್ರಗಳಿಗೆ ಅಗತ್ಯವಾದ - PPE ಕಿಟ್, N95 ಮಾಸ್ಕ್ ಮತ್ತು ಒಸೆಲ್ಟಾಮಿವಿರ್ ಔಷಧಿಗಳನ್ನು ಸಮರ್ಪಕ ಪ್ರಮಾಣದಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ILI/SARI ಪ್ರಕರಣಗಳನ್ನು ಆರಂಭಿಕ ಹಂತದಲ್ಲೇ ಗುರುತಿಸುವುದು, ನಿರ್ಣಯಿಸುವುದು ಹಾಗೂ ಅಗತ್ಯ ಚಿಕಿತ್ಸೆಯನ್ನು ಒದಗಿಸುವ ಕುರಿತು ಆರೋಗ್ಯ ಸಿಬ್ಬಂದಿಗೆ ಅರಿವು ಮತ್ತು ತರಬೇತಿ ನೀಡಲಾಗಿದೆ.
ಸೋಂಕು ತಡೆಗಟ್ಟುವಿಕೆ ಮತ್ತು ಸಾರ್ವಜನಿಕ ಜಾಗೃತಿ:
ಆರೋಗ್ಯ ಇಲಾಖೆಯ ಎಲ್ಲಾ ಆರೋಗ್ಯ ಸೌಲಭ್ಯಗಳಲ್ಲಿ ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಮಗಳನ್ನು ಬಲಪಡಿಸಿದ್ದು, ಉಸಿರಾಟದ ನೈರ್ಮಲ್ಯ, ಕೆಮ್ಮುವಾಗ ಅನುಸರಿಸಬೇಕಾದ ಶಿಷ್ಟಾಚಾರ ಮತ್ತು ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕುರಿತು ಸಾರ್ವಜನಿಕರಿಗೆ ಒತ್ತು ನೀಡಲಾಗುತ್ತಿದೆ. ಎಲೆಕ್ಟ್ರಾನಿಕ್, ಮುದ್ರಣ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸಮುದಾಯ ಜಾಗೃತಿ ಕಾರ್ಯಕ್ರಮಗಳನ್ನು ತೀವ್ರಗೊಳಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳು, ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವುದು ಮತ್ತು ರೋಗಲಕ್ಷಣಗಳಿರುವ ಸಂದರ್ಭದಲ್ಲಿ ಅನಗತ್ಯವಾಗಿ ಜನಸಂದಣಿ ಇರುವ ಸ್ಥಳಗಳಿಗೆ ತೆರಳುವುದನ್ನು ತಪ್ಪಿಸುವ ಕುರಿತು ಒತ್ತು ನೀಡಲಾಗುತ್ತಿದೆ.
ಸಾರ್ವಜನಿಕರಿಗೆ ಆರೋಗ್ಯ ಸಲಹೆ/ಸಂದೇಶ:
ಋತುಮಾನದ ಜ್ವರದ ಹರಡುವಿಕೆಯನ್ನು ತಡೆಯಲು ಸಾರ್ವಜನಿಕರು ಈ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು:
ಮಾಡಬೇಕಾದುದ್ದು:
ಸೀನುವಾಗ ಮತ್ತು ಕೆಮ್ಮುವಾಗ ಮೂಗು ಮತ್ತು ಬಾಯಿಯನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು.
ಸೋಪು ಮತ್ತು ನೀರಿನಿಂದ ಕೈಗಳನ್ನು ನಿಯಮಿತವಾಗಿ ತೊಳೆಯಬೇಕು.
ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇವಿಸಬೇಕು.
ರೋಗಲಕ್ಷಣಗಳಿರುವ ವ್ಯಕ್ತಿಗಳು ಇತರರಿಂದ ಪ್ರತ್ಯೇಕವಾಗಿರುವುದು ಹಾಗೂ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.
ಮಾಡಬಾರದ್ದು :
ಕಣ್ಣು, ಮೂಗು ಮತ್ತು ಬಾಯಿಯನ್ನು ಕೈಗಳಿಂದ ಪದೇಪದೇ ಮುಟ್ಟಬಾರದು.
ಸ್ವಯಂ-ಔಷಧೋಪಚಾರ (Self-Medication) ಮಾಡಬಾರದು.
ರೋಗಲಕ್ಷಣಗಳಿರುವಾಗ ಜನಸಂದಣಿ ಇರುವ ಸ್ಥಳಗಳಿಗೆ ತೆರಳಬಾರದು.
ಬಳಸಿದ ಕರವಸ್ತ್ರ/ನ್ಯಾಪ್ಕಿನ್‌ಗಳನ್ನು ಮರುಬಳಕೆ ಮಾಡಬಾರದು.
ಇನ್‌ಫ್ಲುಯೆಂಜಾ ಸಂಬಂಧಿತ ರೋಗಲಕ್ಷಣಗಳು ಕಂಡುಬಂದಲ್ಲಿ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ವೈದ್ಯಕೀಯ ಸಲಹೆ ಪಡೆಯುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.






