ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರೀ ಮಳೆ; ಹಲವೆಡೆ ಮರಗಳು ಧರಾಶಾಹಿ

ಬೆಂಗಳೂರು, : ಶುಕ್ರವಾರದಂದು ನಗರಾದ್ಯಂತ ಸುರಿದ ಗುಡುಗು-ಮಿಂಚು ಸಹಿತ ಮಳೆಗೆ ಅವಾಂತರ ಸೃಷ್ಟಿಯಾಗಿತ್ತು. ಸಂಜೆ ಆಗುತ್ತಿದ್ದಂತೆ ನಗರದ ಮೆಜೆಸ್ಟಿಕ್, ಯಶವಂತಪುರ, ವಿದ್ಯಾರಣ್ಯಪುರ, ರಾಜಾಜಿನಗರ, ಜಯನಗರ, ಚಾಮರಾಜಪೇಟೆಯಲ್ಲಿ ಭಾರೀ ಮಳೆಯಾಗಿದೆ.
ಆರ್‌ಆರ್ ನಗರ, ಕುಮಾರಸ್ವಾಮಿ ಬಡಾವಣೆ, ಶಂಕರಮಠ, ಬನಶಂಕರಿ, ಸಿಲ್ಕಬೋರ್ಡ್, ಬಸನಗುಡಿ, ಹೊರಮಾವು, ನಾಗರಭಾವಿ, ಬೆಳ್ಳಂದೂರು, ದೊಮ್ಮಲೂರು, ಬೇಗೂರು, ಬೆಂಗಳೂರು ಎಚ್‍ಎಎಲ್ ಏರ್ ಪೋರ್ಟ್ ಸೇರಿದಂತೆ ಅನೇಕ ಕಡೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಆಗಿದೆ.
ಮಳೆ ಬಿದ್ದ ಕಾರಣ ನಗರದಲ್ಲಿ ಬೈಕ್ ಸವಾರರು, ವಾಹನ ಚಾಲಕರು ಸಮಸ್ಯೆಗೆ ಸಿಲುಕಿದ್ದರು. ಎಲ್ಲರೂ ಕೆಲಸದಿಂದ ಮನೆಗೆ ಹೋಗುವ ಸಮಯಕ್ಕೆ ಮಳೆ ಬರುತ್ತಿದ್ದರಿಂದ ನಗರದ ರಸ್ತೆಗಳಲ್ಲಿ ಟ್ರಾಫಿಕ್ ಸಾಮಾನ್ಯವಾಗಿತ್ತು. ಮಳೆಯಿಂದ ನಗರದ ಬೇರೆ ಬೇರೆ ಕಡೆ 23 ಮರಗಳು ಬಿದ್ದಿದ್ದು 52 ಮರಗಳ ರೆಂಬೆಗಳು ಧರೆಗುರಳಿದವು.
ಜೋರು ಗಾಳಿ ಮಳೆಗೆ ಮರದ ಕೊಂಬೆಗಳು ಅಲ್ಲಲ್ಲಿ ಮುರಿದು ಬಿದ್ದಿವೆ. ನಗರದ ತಾಪಮಾನ ಮುಂದಿನ ಒಂದು ವಾರ ಗರಿಷ್ಠ 32-33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ. ಮೇ 6ರವರೆಗೆ ನಗರಾದ್ಯಂತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.







