ಬೆಂಗಳೂರಿನಲ್ಲಿ ಧಾರಾಕಾರ ಮಳೆ, ಅಂಡರ್ ಪಾಸ್‍ಗಳಲ್ಲಿ ಸಂಚಾರ ನಿರ್ಬಂಧ

ಬೆಂಗಳೂರು : ಶುಕ್ರವಾರ ಸಂಜೆ ನಗರದಲ್ಲಿ ಧಾರಾಕಾರ ಮಳೆಯಾಗಿದ್ದು, ನಗರದ ಪ್ರಮುಖ ರಸ್ತೆಗಳು ಮಳೆ ನೀರಿಂದಾಗಿ ಜಲಾವೃತಗೊಂಡಿದ್ದವು. ವಾಹನ ಸಂಚಾರ ಕೆಲ ಗಂಟೆಗಳ ಕಾಲ ಅಸ್ತವ್ಯಸ್ತವಾಗಿತ್ತು. ಕೆಲ ಅಂಡರ್ ಪಾಸ್‍ಗಳಲ್ಲಿ ಜಲಾವೃತಗೊಂಡ ಪರಿಣಾಮ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು.
ಸಂಜೆಯಿಂದಲೇ ನಗರದಾದ್ಯಂತ ಮೋಡ ಕವಿದ ವಾತಾವರಣ ಇತ್ತು. ಸಂಜೆ ಆಗುತ್ತಿದ್ದಂತೆ ಧಾರಾಕಾರ ಮಳೆ ಸುರಿದಿದೆ. ಮೆಜೆಸ್ಟಿಕ್, ಕೆ.ಆರ್. ಮಾರ್ಕೆಟ್, ಯುಬಿ ಸಿಟಿ, ರಿಚ್‍ಮಂಡ್ ಸರ್ಕಲ್, ಶಿವಾನಂದ ಸರ್ಕಲ್, ಜಯನಗರ ಹಾಗೂ ಮಲ್ಲೇಶ್ವರಂ ಸೇರಿದಂತೆ ನಗರದ ಮಧ್ಯಭಾಗದಲ್ಲಿ ಧಾರಾಕಾರ ಮಳೆಯಾಗಿದೆ.
ಯಲಹಂಕ, ಹೆಬ್ಬಾಳ, ಆರ್‍ಟಿ ನಗರ, ಸಹಕಾರನಗರ, ವಿದ್ಯಾರಣ್ಯಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ, ವಿಜಯನಗರ, ನಾಯಂಡಹಳ್ಳಿ, ಬನಶಂಕರಿ, ಕೋರಮಂಗಲ, ಶಾಂತಿನಗರ, ಆನಂದ ರಾವ್ ವೃತ್ತ, ವಿದ್ಯಾರಣ್ಯಪುರ, ಸಹಕಾರನಗರದಲ್ಲಿ ಮಳೆ, ಟೌನ್‍ಹಾಲ್, ಮಾಗಡಿ ರಸ್ತೆ, ದಾಸರಹಳ್ಳಿ ಭಾಗದಲ್ಲೂ ಮಳೆ ಸುರಿದಿದ್ದು, ಕಚೇರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನ ಸವಾರರು ಮಳೆಗೆ ಸಿಲುಕಿ ಪರದಾಡಿದರು.
ಇನ್ನು ಧಾರಾಕಾರ ಮಳೆಗೆ ಬೆಂಗಳೂರಿನ ತಗ್ಗು ಪ್ರದೇಶಗಳು ಸಂಪೂರ್ಣ ಕೆರೆಯಂತೆ ಮಾರ್ಪಟ್ಟಿತ್ತು. ರಸ್ತೆಗಳ ಮೇಲೆ ನೀರು ನಿಂತಿದ್ದು, ಅಂಡರ್‍ಪಾಸ್‍ಗಳು ಜಲಾವೃತಗೊಂಡಿದ್ದವು. ಶಿವಾನಂದ ಸರ್ಕಲ್‍ನ ರೈಲ್ವೆ ಅಂಡರ್ ಪಾಸ್‍ನಲ್ಲಿ ಭಾರೀ ನೀರು ಹಿನ್ನೆಲೆ ಕಾರು ಸಿಲುಕಿಕೊಂಡಿತ್ತು. ಕೆ.ಆರ್ ಸರ್ಕಲ್‍ನಲ್ಲಿರುವ ಅಂಡರ್ ಪಾಸ್‍ನಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು.






