ರಾಜ್ಯ ಮಾಹಿತಿ ಆಯುಕ್ತರ ಆಯ್ಕೆ ಪಟ್ಟಿ ವಿರುದ್ಧ ನೈಜ ಹೋರಾಟಗಾರರ ವೇದಿಕೆಯಿಂದ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ

ಬೆಂಗಳೂರು: ರಾಜ್ಯ ಮಾಹಿತಿ ಆಯುಕ್ತರ ಆಯ್ಕೆ ಪಟ್ಟಿ ವಿರುದ್ಧ ಹೈಕೋರ್ಟ್‌ನಲ್ಲಿ ನೈಜ ಹೋರಾಟಗಾರರ ವೇದಿಕೆ ಕೆ.ಮಲ್ಲಿಕಾರ್ಜುನ್ ರಾಜು ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ.
ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತ ಮತ್ತು ಮಾಹಿತಿ ಆಯುಕ್ತರನ್ನು ನೇಮಕ ಮಾಡಿ ರಾಜ್ಯ ಸರಕಾರ ಜ.30ರಂದು ಆದೇಶ ಹೊರಡಿಸಿತ್ತು.
ಸದರಿ ಆದೇಶವು ಭಾರತದ ಸರ್ವೋಚ್ಚ ನ್ಯಾಯಾಲಯದ ಆದೇಶದ ಅನುಷ್ಠಾನ ಮತ್ತು ಮಾರ್ಗ ಸೂಚಿಗಳನ್ನು ಪಾಲನೆ ಮಾಡದೆ, ನ್ಯಾಯಾಲಯದ ಆದೇಶದ ಉಲ್ಲಂಘನೆ ಮಾಡಿರುವ ಬಗ್ಗೆ ಜ.30ರಂದು ರಾಜ್ಯಪಾಲರಿಗೆ ನೈಜ ಹೋರಾಟಗಾರರ ವೇದಿಕೆಯ ತ್ರಿಸದಸ್ಯ ನಿಯೋಗವು ಮನವಿ ಸಲ್ಲಿಸಿತ್ತು. ಆದರೆ ತ್ರಿಸದಸ್ಯ ನಿಯೋಗವು ಭೇಟಿಯಾಗುವ ಮೊದಲೇ ಆಯ್ಕೆ ಪಟ್ಟಿಯನ್ನು ಅನುಮೋದಿಸಿ ಸರಕಾರಕ್ಕೆ ಕಳುಹಿಸಿರುವುದಾಗಿ ರಾಜ್ಯಪಾಲರು ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಸದರಿ ಆಯ್ಕೆಯಲ್ಲಿ ಆಗಿರುವ ನ್ಯೂನತೆಗಳ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ಕೆ.ಮಲ್ಲಿಕಾರ್ಜುನ್ ರಾಜು ರವರ ಮುಖಾಂತರ W.P.No 3203/2025 ಅರ್ಜಿಯನ್ನು ಸಲ್ಲಿಸಲಾಗಿದ್ದು, ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಾಗಿದೆ.