ಮಹೇಶ್ ಶೆಟ್ಟಿ ತಿಮರೋಡಿ ಮತ್ತಿತರರ ಸಂಪರ್ಕ ಜಾಲಗಳ ಬಗ್ಗೆ ತನಿಖೆಗೆ ಮನವಿ; ದ.ಕ. ಎಸ್ಪಿ ಅವರಿಂದ ಮಾಹಿತಿ ಕೇಳಿದ ಹೈಕೋರ್ಟ್

ಬೆಂಗಳೂರು : ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ನಡೆಸಲಾಗುತ್ತಿರುವ ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಟಿ.ಜಯಂತ್ ಹಾಗೂ ಎಂ.ಡಿ.ಸಮೀರ್ ಮತ್ತಿತರರ ಚಲನವಲನ, ಚಟುವಟಿಕೆಗಳು, ಹಣಕಾಸಿನ ಮೂಲ ಮತ್ತವರ ಸಂಪರ್ಕ ಜಾಲಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕೋರಲಾಗಿರುವ ದೂರಿನ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ವರಿಷ್ಠಾಧಿಕಾರಿಗೆ ಹೈಕೋರ್ಟ್ ಸೂಚಿಸಿದೆ.
ಬೆಂಗಳೂರು ನಿವಾಸಿ ತೇಜಸ್ ಎ.ಗೌಡ, ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಉಜಿರೆ ನಿವಾಸಿ ಭಾಸ್ಕರ್ ಬಡೆಕೊಟ್ಟು, ಧರ್ಮಸ್ಥಳ ನಿವಾಸಿಗಳಾದ ಸುರೇಂದ್ರ ಪ್ರಭು ಹಾಗೂ ಧನಕೀರ್ತಿ ಅರಿಗ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಡಿಸೆಂಬರ್ 16ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಕೀರ್ತನ್ ಕುಮಾರ್ ವಾದ ಮಂಡಿಸಿ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಟಿ. ಜಯಂತ್ ಹಾಗೂ ಎಂ.ಡಿ.ಸಮೀರ್ ಮತ್ತಿತರರ ಚಲನವಲನ, ಚಟುವಟಿಕೆ, ಹಣಕಾಸಿನ ಮೂಲ ಮತ್ತು ಅವರ ಸಂಪರ್ಕ ಜಾಲಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕೋರಿ ಎಸ್ಐಟಿ, ರಾಜ್ಯ ಸರಕಾರದ ಗೃಹ ಇಲಾಖೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಬೆಂಗಳೂರು ನಗರ ಪೊಲೀಸ್ ಆಯುಕ್ತರು, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಎಸ್.ಐ.ಟಿ, ಆದಾಯ ತೆರಿಗೆ ಮಂಗಳೂರು ಕೇಂದ್ರ ವಲಯ ಅಧಿಕಾರಿ, ಜಾರಿ ನಿರ್ದೇಶನಾಲಯಕ್ಕೆ ಅರ್ಜಿದಾರರು 2025ರ ಆಗಸ್ಟ್ 20, ಸೆಪ್ಟೆಂಬರ್ 5, 8 ಹಾಗೂ 9ರಂದು ಮನವಿ ಮತ್ತು ದೂರು ಸಲ್ಲಿಸಿದ್ಧಾರೆ. ಆದರೆ, ಅವುಗಳನ್ನು ಪರಿಗಣಿಸಿ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಸರಕಾರದ ಪರ ವಕೀಲರು, ಅರ್ಜಿದಾರರ ದೂರು ಆಧರಿಸಿ ಕೈಗೊಂಡ ಕ್ರಮಗಳ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಂದ ಮಾಹಿತಿ ನೀಡಿ ಪಡೆದು ತಿಳಿಸಲಾಗುವುದು. ಅದಕ್ಕಾಗಿ ಕಾಲಾವಕಾಶ ನೀಡಲಾಗುವುದು ಎಂದು ತಿಳಿಸಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ ಅರ್ಜಿ ವಿಚಾರಣೆ ಮುಂದೂಡಿತು.







