ಅರ್ಕಾವತಿ ಬಡಾವಣೆ; ಭೂಸ್ವಾಧೀನ ಪ್ರಕ್ರಿಯೆಯಿಂದ ಜಮೀನು ಕೈಬಿಡಲು ನಿರ್ದೇಶನ ಕೋರಿದ್ದ ಅರ್ಜಿ ವಜಾ

ಬೆಂಗಳೂರು : ನಗರದ ಹೆಣ್ಣೂರು ಗ್ರಾಮದಲ್ಲಿ ಅರ್ಕಾವತಿ ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ನೂರಾರು ಕೋಟಿ ರೂ. ಮೌಲ್ಯದ 26 ಎಕರೆ 12 ಗುಂಟೆ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಲು ಬಿಡಿಎಗೆ ಆದೇಶಿಸುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಭೂ ಮಾಲೀಕರಾದ ಪ್ರೇಮ್ ಸಿಂಗ್, ಅವರ ಪುತ್ರಿ ಬೀಜಾಕ್ಷರಿ ವರ್ಮನ್ ಮತ್ತು ಪುತ್ರ ಶಾಹಿಲ್ ವರ್ಮನ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಡಿ.ಕೆ. ಸಿಂಗ್ ನೇತೃತ್ವದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದೆ. ಇದರಿಂದ ನೂರಾರು ಕೋಟಿ ಮೌಲ್ಯದ ಜಮೀನು ಬಿಡಿಎ ಸುಪರ್ದಿಯಲ್ಲಿ ಉಳಿದಂತಾಗಿದೆ.
ಹೈಕೋರ್ಟ್ ಆದೇಶವೇನು?
ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನಪಡಿಸಿಕೊಳ್ಳಲು ಸರ್ಕಾರ 2003 ಫೆಬ್ರವರಿ 3ರಂದು ಪ್ರಾಥಮಿಕ ಮತ್ತು 2004ರ ಫೆಬ್ರವರಿ 23ರಂದು ಅಂತಿಮ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯಂತೆ ಬಿಡಿಎ, ಅರ್ಜಿದಾರರ ಜಮೀನು ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದೆ. ಈ ಹಿಂದೆ ಭೂಸ್ವಾಧೀನ ಪ್ರಕ್ರಿಯೆಗೆ ತಮ್ಮದೇನೂ ಆಕ್ಷೇಪಣೆ ಇಲ್ಲವೆಂದೂ ಹಾಗೂ ಜಮೀನಿಗೆ ಪರಿಹಾರ ಕಲ್ಪಿಸುವಂತೆ ಪ್ರೇಮ್ ಸಿಂಗ್ ಅವರ ಪತ್ನಿಯೇ ಬಿಡಿಎಗೆ ತಿಳಿಸಿದ್ದರು. ಜತೆಗೆ, ವಿವಾದಿತ ಜಮೀನನ್ನು ಭೂ ಸ್ವಾಧೀನದಿಂದ ಕೈಬಿಡಬೇಕೆಂಬ ಅರ್ಜಿದಾರರ ಮನವಿಯನ್ನು ನ್ಯಾಯಮೂರ್ತಿ ಕೆ.ಎನ್. ಕೇಶವ ನಾರಾಯಣ ಅವರ ಸಮಿತಿ ಪರಿಶೀಲಿಸಿ ತಿರಸ್ಕರಿಸಿದೆ. ಈ ಹಂತದಲ್ಲಿ ಅರ್ಜಿದಾರರ ಜಮೀನನ್ನು ಭೂಸ್ವಾಧೀನದಿಂದ ರಕ್ಷಣೆ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.
ಪ್ರಕರಣದ ಹಿನ್ನೆಲೆ:
ಹೆಣ್ಣೂರು ಗ್ರಾಮದ ಸರ್ವೇ ನಂಬರ್ 17/1, 18, 19, 20 ಮತ್ತು 26ರಲ್ಲಿನ ತಮ್ಮ ಮಾಲೀಕತ್ವದ ಒಟ್ಟು 26 ಎಕರೆ 12 ಗುಂಟೆ ಜಮೀನನ್ನು ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಈ ಜಮೀನನ್ನು ಭೂಸ್ವಾಧೀನದಿಂದ ಕೈಬಿಡಲು ಬಿಡಿಎಗೆ ಆದೇಶಿಸಬೇಕು. ಈ ಕುರಿತ ತಮ್ಮ ಮನವಿ ತಿರಸ್ಕರಿಸಿರುವ ನಿವೃತ್ತ ನ್ಯಾಯಮೂರ್ತಿ ಕೆ.ಎನ್. ಕೇಶವ ನಾರಾಯಣ ಅವರ ಸಮಿತಿಯ ಕ್ರಮ ರದ್ದುಪಡಿಸಬೇಕು ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.







