ಭೂಮಾಲೀಕರಿಗೆ ಪಾವತಿಯಾಗದ ಪರಿಹಾರ; 17 ವರ್ಷಗಳ ಹಿಂದಿನ ಭೂಸ್ವಾಧೀನ ಅಧಿಸೂಚನೆ ರದ್ದು

ಬೆಂಗಳೂರು: ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಗೆ (ಬಿಎಂಐಸಿಪಿ) 17 ವರ್ಷಗಳ ಹಿಂದೆ ಬೆಂಗಳೂರು ದಕ್ಷಿಣದ ತಲಘಟ್ಟಪುರದಲ್ಲಿ 1 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಪಡಿಸಿದೆ.
ಬೆಂಗಳೂರಿನ ಯಲಚೇನಹಳ್ಳಿಯ ರತ್ನಾ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ಪುರಸ್ಕರಿಸಿರುವ ನ್ಯಾಯಮೂರ್ತಿ ಕೆ. ಎಸ್. ಹೇಮಲೇಖಾ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ಭೂಮಿಯ ಸರ್ವೇ ಸಂಖ್ಯೆಗೆ ಸೀಮಿತವಾಗಿ ಭೂಸ್ವಾಧೀನ ಅಧಿಸೂಚನೆಯನ್ನು ರದ್ದುಪಡಿಸಿದೆ.
ಅಂತಿಮ ಅಧಿಸೂಚನೆಯಾಗಿ 17 ವರ್ಷಗಳಾದರೂ ಪರಿಹಾರ ಪಾವತಿಸಿಲ್ಲ. ಪ್ರತಿವಾದಿಗಳು ಇದಕ್ಕೆ ಯಾವುದೇ ವಿವರಣೆ ನೀಡಿಲ್ಲ. ಇಂಥ ಅಸಾಧಾರಣ ನಿಷ್ಕ್ರಿಯತೆಯು ಕಾನೂನನ್ನು ವಿಫಲಗೊಳಿಸುವುದರ ಜತೆಗೆ ಸ್ವಾಧೀನವನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ, ಅರ್ಜಿದಾರರ ವಾದದಲ್ಲಿ ಹುರುಳಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ ಅರ್ಜಿದಾರರ ಭೂಮಿ ಸ್ವಾಧೀನಕ್ಕೆ ಹೊರಡಿಸಲಾಗಿದ್ದ ಅಧಿಸೂಚನೆ ರದ್ದುಪಡಿಸಿ ಆದೇಶಿಸಿದೆ.
ಅರ್ಜಿದಾರರ ವಾದವೇನು?
ವಿಚಾರಣೆ ವೇಳೆ ವಾದ ಮಂಡಿಸಿದ್ದ ರತ್ನಾ ರೆಡ್ಡಿ ಪರ ಹಿರಿಯ ವಕೀಲ ಎಚ್.ಎನ್. ಶಶಿಧರ ಅವರು, 2008ರಲ್ಲೇ ಅಂತಿಮ ಭೂಸ್ವಾಧೀನ ಅಧಿಸೂಚನೆ ಹೊರಡಿಸಲಾಗಿದ್ದರೂ ಸರ್ಕಾರ ಭೂಮಿಯನ್ನು ವಶಕ್ಕೆ ಪಡೆದಿಲ್ಲ ಮತ್ತು ಪರಿಹಾರವನ್ನೂ ಪಾವತಿಸಿಲ್ಲ. ಇದರಿಂದ ಭೂಸ್ವಾಧೀನ ಪ್ರಕ್ರಿಯೆಯು ಸಿಂಧುವಾಗುವುದಿಲ್ಲ. ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ರತ್ನಾ ರೆಡ್ಡಿಯವರಿಂದ ಪಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ. ಭೂಮಿ ಇಂದಿಗೂ ಅವರ ಬಳಿಯೇ ಇದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಬಿಎಂಐಸಿಪಿಯು ನಿಯಮಕ್ಕೆ ವಿರುದ್ಧವಾಗಿ ಹಿಂಬರಹ ನೀಡಿದ್ದು, ನಂದಿ ಮೂಲಸೌಕರ್ಯ ಕಾರಿಡಾರ್ ಸಂಸ್ಥೆಯು (ನೈಸ್) ವಿವಾದಿತ ಭೂಮಿ ಬೇರೊಂದು ಕಾರಣಕ್ಕೆ ಬೇಕು ಎಂದು ಹೇಳಲಾಗದು. ನೈಸ್ ಸಂಸ್ಥೆಯು ರಿಯಾಯಿತಿದಾರ ಮಾತ್ರ, ಬಿಎಂಐಸಿಪಿಯ ತಾಂತ್ರಿಕ ನಿರ್ಣಯವನ್ನು ನೈಸ್ ಅತಿಕ್ರಮಿಸಲಾಗದು ಎಂದು ಆಕ್ಷೇಪಿಸಿದ್ದರಲ್ಲದೆ, 554 ಎಕರೆ ಹೆಚ್ಚುವರಿ ಭೂಮಿಯನ್ನು ವರ್ಗಾಯಿಸಲಾಗಿದ್ದು, ಮುಂದೆ ಯಾವುದೇ ಭೂಮಿಯನ್ನು ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ರಾಜ್ಯ ಸರ್ಕಾರ ಪ್ರಮಾಣಪತ್ರ ಸಲ್ಲಿಸಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಪ್ರತಿವಾದಿಗಳಾದ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ), ನೈಸ್ ಮತ್ತು ಇತರ ರಾಜ್ಯ ಸಂಸ್ಥೆಗಳ ಪರ ವಕೀಲರು, ಸುಮಾರು 2 ದಶಕಗಳ ಹಿಂದೆ ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಅರ್ಜಿದಾರರು ತಡವಾಗಿ ಅರ್ಜಿ ಸಲ್ಲಿಸಿದ್ದಾರೆ. ಅದನ್ನು ಮಾನ್ಯ ಮಾಡಬಾರದೆಂದು ಕೋರಿದ್ದರು. ನೈಸ್ ಪರ ವಕೀಲರು, ಕನಕಪುರ ರಸ್ತೆಗೆ ಸಂಪರ್ಕ ಕಲ್ಪಿಸಲು (ಎನ್‌ಎಚ್ 209) ಅನ್ನು ಬಿಎಂಐಸಿಪಿಯ ಬಾಹ್ಯ ರಸ್ತೆಯೊಂದಿಗೆ ಸಂಪರ್ಕಿಸುವ ರ್ಯಾಂಪ್ ನಿರ್ಮಿಸಲು ಭೂಮಿ ಅಗತ್ಯವಿದೆ. ಅರ್ಜಿದಾರರು ಭೂಮಿ ಹಸ್ತಾಂತರಿಸಲು ನಿರಾಕರಿಸಿದ್ದರಿಂದ ತಾತ್ಕಾಲಿಕ ರ್ಯಾಂಪ್ ಅನ್ನು ಬೇರೆಡೆ ಸ್ಥಾಪಿಸಲಾಗಿದೆ ಎಂದು ವಾದಿಸಿದ್ದರು.







