ಯೋಗೀಶ ಗೌಡ ಕೊಲೆ ಪ್ರಕರಣ; ಬಾಕಿ ಸಾಕ್ಷಿಗಳ ಬಗ್ಗೆ ಮೆಮೊ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು : ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ ಗೌಡ ಕೊಲೆ ಪ್ರಕರಣದಲ್ಲಿ ಬಾಕಿ ಇರುವ ಸಾಕ್ಷಿಗಳ ಕುರಿತು ಮೆಮೊ ಸಲ್ಲಿಸುವಂತೆ ಪ್ರಾಸಿಕ್ಯೂಷನ್‌ಗೆ ಹೈಕೋರ್ಟ್ ನಿರ್ದೇಶಿಸಿದೆ.
ಕೊಲೆ ಪ್ರಕರಣದಲ್ಲಿ 15ನೇ ಆರೋಪಿಯಾಗಿರುವ ವಿನಯ ಕುಲಕರ್ಣಿ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಿನಯ ಕುಲಕರ್ಣಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ. ನಾಗೇಶ್, ಸಾಕ್ಷಿಯೊಬ್ಬರು ಅರ್ಜಿದಾರರ ಕಾಲಿಗೆ ಬಿದ್ದರೆಂಬ ಆರೋಪವಿದೆ. ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳಿಲ್ಲ. ತನಿಖಾಧಿಕಾರಿ ಬಿಟ್ಟು ಉಳಿದ ಸಾಕ್ಷಿಗಳ ವಿಚಾರಣೆ ಆಗಿದೆ. ರಾಜಕೀಯ ದುರುದ್ದೇಶದಿಂದ ಕೊಲೆ ಪ್ರಕರಣ ದಾಖಲಿಸಲಾಗಿದೆ. ಆದ್ದರಿಂದ, ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.
ಇದನ್ನು ಆಕ್ಷೇಪಿಸಿದ ಸಿಬಿಐ ಪರ ವಿಶೇಷ ಅಭಿಯೋಜಕ (ಎಸ್‌ಪಿಪಿ) ಪಿ. ಪ್ರಸನ್ನ ಕುಮಾರ್, ಇನ್ನೂ ಹೆಚ್ಚುವರಿ ಸಾಕ್ಷಿಗಳ ವಿಚಾರಣೆ ಬಾಕಿಯಿದೆ. ಸಂಪೂರ್ಣ ಸಾಕ್ಷ್ಯ ವಿಚಾರಣೆವರೆಗೆ ಜಾಮೀನು ನೀಡಬಾರದು. ಸುಪ್ರೀಂಕೋರ್ಟ್ ಅರ್ಜಿದಾರರ ಜಾಮೀನು ರದ್ದುಪಡಿಸಿರುವುದನ್ನು ನ್ಯಾಯಾಲಯ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಆಗ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಕಿಯಿರುವ ಸಾಕ್ಷಿಗಳ ಬಗ್ಗೆ ಮೆಮೊ ಸಲ್ಲಿಸಲು ಎಸ್‌ಪಿಪಿಗೆ ಸೂಚನೆ ನೀಡಿ ಅರ್ಜಿ ವಿಚಾರಣೆ ಮುಂದೂಡಿತು.





