ಕರ್ನಾಟಕ ಹೈಕೋರ್ಟ್‌ಗೆ ನೂತನ ನ್ಯಾಯಮೂರ್ತಿಗಳ ನೇಮಕ

ಬೆಂಗಳೂರು : ಕರ್ನಾಟಕ ಹೈಕೋರ್ಟ್‌ನ ನೂತನ ನ್ಯಾಯಮೂರ್ತಿಗಳನ್ನಾಗಿ ಹಾಲಿ ಜಿಲ್ಲಾನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವ, ರಾಜೇಶ್ವರಿ ನಾರಾಯಣ ಹೆಗ್ಡೆ, ಕೆದಂಬಾಡಿ ಗಣೇಶ ಶಾಂತಿ ಮತ್ತು ಬೃಂಗೇಶ್ ಮಹಾದೇವಪ್ಪಅವರನ್ನು ನೇಮಕ ಮಾಡಿ ರಾಷ್ಟ್ರಪತಿ ಆದೇಶ ಹೊರಡಿಸಿದ್ದಾರೆ.
ಸುಪ್ರೀಂಕೋರ್ಟ್‌ನ ಕೊಲಿಜಿಯಂ ಕಳೆದ ಎಪ್ರಿಲ್‌ನಲ್ಲಿ ಮಾಡಿದ್ದ ಶಿಫಾರಸು ಆಧರಿಸಿ ರಾಷ್ಟ್ರಪತಿ ಸಂವಿಧಾನದ 224ನೇ ವಿಧಿಯ ಷರತ್ತು (1)ರ ಮೂಲಕ ಅಧಿಕಾರ ಚಲಾಯಿಸಿ ಈ ನೇಮಕಾತಿ ಮಾಡಿದ್ದಾರೆಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ತಿಳಿಸಿದೆ.
ರಾಜೇಶ್ವರಿ ನಾರಾಯಣ ಹೆಗ್ಡೆ ಅವರನ್ನು ಅಧಿಕಾರ ವಹಿಸಿಕೊಂಡ ದಿನದಿಂದ ಅವರು ನಿವೃತ್ತಿಯಾಗುವ 2028ರ ಮಾ.17ರವರೆಗೆ ಹಾಗೂ ಕೆದಂಬಾಡಿ ಗಣೇಶ ಶಾಂತಿ ಮತ್ತು ಬೃಂಗೇಶ್ ಮಹಾದೇವಪ್ಪಅವರನ್ನು ಎರಡು ವರ್ಷಗಳ ಅವಧಿಗೆ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೈಕೋರ್ಟ್‌ನಲ್ಲಿ ಸದ್ಯ ಸಿಜೆ 45 ನ್ಯಾಯಮೂರ್ತಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಬೆಂಗಳೂರಿನ ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರಗಿ ಪೀಠಗಳಿಗೆ ಸೇರಿ ಒಟ್ಟು 62 ನ್ಯಾಯಮೂರ್ತಿಗಳ ಹುದ್ದೆಗಳು ಮಂಜೂರಾಗಿವೆ. ಇದೀಗ ಮೂವರು ನ್ಯಾಯಮೂರ್ತಿಗಳು ನೇಮಕಗೊಂಡರೂ ಸಹ ಇನ್ನೂ 14 ಹುದ್ದೆಗಳು ಖಾಲಿ ಇರಲಿವೆ.






