ರಾಜಕಾಲುವೆ, ಮಳೆ ನೀರು ಕಾಲುವೆಗಳ ಬಫರ್ ಝೋನ್ ಕಡಿತ ಪ್ರಶ್ನಿಸಿದ ಪಿಐಎಲ್; ಸರ್ಕಾರ, ಜಿಬಿಎಗೆ ಹೈಕೋರ್ಟ್ ನೋಟಿಸ್

ಬೆಂಗಳೂರು: ನಗರದಲ್ಲಿ ಪರಿಷ್ಕೃತ ಮಾಸ್ಟರ್ ಪ್ಲಾನ್-2015ಕ್ಕೆ ತಿದ್ದುಪಡಿ ಮಾಡಿ ರಾಜಕಾಲುವೆ ಹಾಗೂ ಮಳೆ ನೀರು ಕಾಲುವೆ ಸುತ್ತಮುತ್ತಲಿನ ಬಫರ್ ವಲಯವನ್ನು ಕಡಿತಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ರಾಜ್ಯ ಸರ್ಕಾರ, ಜಿಬಿಎ ಹಾಗೂ ಬಿಡಿಎಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಜನಾಧಿಕಾರ ಸಂಘರ್ಷ ಪರಿಷತ್‌ನ ಸಹಾಧ್ಯಕ್ಷ ಹಾಗೂ ವ್ಯವಸ್ಥಾಪಕ ಟ್ರಸ್ಟಿ ಅದರ್ಶ್ ಆರ್. ಅಯ್ಯರ್ ಸಲ್ಲಿಸಿರುವ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಸೆಪ್ಟೆಂಬರ್ 2ಕ್ಕೆ ಮುಂದೂಡಿತು.
ಸರ್ಕಾರದ ಬಫರ್ ವಲಯ ಕಡಿತ ನಿರ್ಧಾರವು ಕಾನೂನು, ಪರಿಸರ ಕಾನೂನು ಮತ್ತು ನಿಯಮಗಳಿಗೆ ವಿರುದ್ಧವಾಗಿದೆ. ಆದ್ದರಿಂದ, ನಗರಾಭಿವೃದ್ಧಿ ಇಲಾಖೆ 2025ರ ಅಕ್ಟೋಬರ್ 15ರಂದು ಹೊರಡಿಸಿರುವ ಅಂತಿಮ ಅಧಿಸೂಚನೆಯನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
ಅರ್ಜಿದಾರರ ವಾದವೇನು?
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, 2015ರ ಪರಿಷ್ಕತ ಮಾಸ್ಟರ್‌ಪ್ಲಾನ್ ಅನ್ನು ತಿದ್ದುಪಡಿ ಮಾಡುವ ಮೂಲಕ ಸರ್ಕಾರ ಬೆಂಗಳೂರು ನಗರದಲ್ಲಿನ ರಾಜಕಾಲುವೆಗಳು/ಮಳೆನೀರು ಚರಂಡಿಗಳ ಬಫರ್ ವಲಯಗಳನ್ನು ತೀವ್ರವಾಗಿ ಕಡಿತಗೊಳಿಸಿ ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ಮಳೆ ಬಂದಾಗಲೆಲ್ಲ ಬೆಂಗಳೂರು ನಗರದಲ್ಲಿ ಭಾರಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇತ್ತೀಚೆಗೆ ಜೀವಹಾನಿ ಮತ್ತು ಆಸ್ತಿಪಾಸ್ತಿ ಹಾನಿ ಸಂಭವಿಸುವುದೂ ಹೆಚ್ಚಾಗಿದೆ ಎಂದರು.
ಮುಂದುವರಿದು, ಬಫರ್ ವಲಯದ ಕಡಿತದಿಂದ ಮಳೆ ನೀರು ಕಾಲುವೆಗಳ ಮೇಲಿನ ನೀರಿನ ಒತ್ತಡ ಹೆಚ್ಚಾಗುವಂತೆ ಮಾಡಿ ನಗರದ ಹಲವೆಡೆ ಪ್ರವಾಹದ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ. ಬೆಂಗಳೂರಿನ ಮಾಸ್ಟರ್ ಪ್ಲಾನ್‌ನ ವಿವರವಾದ ಪರಿಷ್ಕರಣೆ ನಡೆಸದೆ ನಿರ್ದಿಷ್ಟವಾಗಿ ಬಫರ್ ವಲಯವನ್ನು ತಗ್ಗಿಸಿರುವುದು ಅಸ್ತಿತ್ವದಲ್ಲಿರುವ ಕಾನೂನುಗಳ ಉಲ್ಲಂಘನೆಯಾಗಿದೆ. ಈ ಕ್ರಮ ಅವೈಜ್ಞಾನಿಕ ಮತ್ತು ದೂರದೃಷ್ಟಿಯಿಲ್ಲದ ನಿರ್ಧಾರವಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.






